ಪುಟ:ಕಂಬನಿ-ಗೌರಮ್ಮ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳೆದ ವರ್ಷ ಅವಳ ಪತಿಯೂ ಬೇಕಾದಷ್ಟು ಸಾಲ ಮಾಡಿಟ್ಟು ಅವರ ದಾರಿ ಹಿಡಿದ. ಅಂದಿನಿಂದ ಅನಾಥೆ ಪಾರ್ವತಿ ಅವಳ ಚಿಕ್ಕ ಮಗುನನ್ನು ಸಾಕುವದಕ್ಕೆ ಬೇರೇನೂ ಉಪಾಯ ತೋರದೆ ನಾಗೇಶರಾಯರ ಮನೆಯಲ್ಲಿ ಅಡಿಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.

ಮಗುವಿಗೋಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದ ಹೊರೆಯೊಡನೆ ಬಹಿಷ್ಕಾರವನ್ನೂ ಹಾಕಿಸಿ ಮೊನ್ನೆ ಮನೆಯಿಂದ ಹೊರದೂಡಿರುವರು. ನಿನ್ನೆ ರಾತ್ರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಡನೆ ಬಾವಿಯ ಹತ್ತಿರ ನಿಂತಿದ್ದಳಂತೆ. ಗೈಬಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಬಲಾತ್ಕಾರದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ. ಬಲಾತ್ಕಾರದಿಂದ ಗೈಬಿ ಅವಳನ್ನು ಕರೆದುಕೊಂಡು ಬಾರದಿದ್ದರೆ ಈ ದಿನ ತಾಯಿ ಮಗುವಿನ ಶವಗಳನ್ನು ಬಾವಿಯಿಂದ ತೆಗೆಯಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತುಸಿಕ್ಕಿತು.

ನನ್ನನ್ನು ನೋಡಿ ಪಾಪ-ಮುಖವನ್ನು ಮುಚ್ಚಿಕೊಂಡು ಅಳತೊಡಗಿದಳು. ರಾತ್ರಿ ನಿದ್ರೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ವಲ್ಪ ಹಾಲು ಕುಡಿಸಿದ್ದಾಳೆ. ಎಷ್ಟು ಹೇಳಿದರೂ ತಾನೇನೂ ಮುಟ್ಟುವುದಿಲ್ಲ. ನಿನ್ನೆಯಿಂದಲ೧ ಉಪವಾಸ. ನಿನಗಿದೆಲ್ಲಾ ಏಕೆ ಬರೆಯುತ್ತಿರುವೆನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವು ಅತ್ಯಗತ್ಯವಾದುದರಿಂದ. ಎಲ್ಲಿ ಹೋಗುವದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ. ಜಾತಿಯವರು ಸೇರಿಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿಸಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡು ಎಂದು ಕೇಳಿದರೆ 'ಇಲ್ಲೇ ಇದ್ದುಬಿಡುತ್ತೇನೆ; ಈ ಮಗುವಿನ ಸಲುವಾಗಿ ನೀವಾದರೂ ಆಶ್ರಯ ಕೊಡಿ' ಎಂದು ಅಳುತ್ತಾಳೆ. ಆದುದರಿಂದ ನೀನು ಇಲ್ಲಿಗೆ

೮೩