ಪುಟ:ಕಂಬನಿ-ಗೌರಮ್ಮ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನೆ ಲಕ್ಷ್ಮಿ ಇದ್ದಾಳಲ್ಲ-ಈ ಜಾತಿಗೇಡಿಯ ಜೊತೆಯಲ್ಲೇ ಶಾಲೆಗೆ ಹೋಗುತ್ತಿದ್ದವಳು - ಅವಳನ್ನುತ್ತಾಳೆ ಕೇಳಿ:- 'ಸೇರದೆ ಅವಳೇನು ಮಾಡುವುದು? ಸೇರಿದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ದಾರಿ ತೋರಿಸಿದ ನಿಮಗೆ ಅವಳೇನಾದರೇನು ?' ಎಂತ ಬಹಿಷ್ಕಾರ ಹಾಕಿದ್ದು ತಪ್ಪಂತೆ ! ಜಾತಿ ಕೆಟ್ಟವಳನ್ನು ಮನೆಯಲ್ಲಿರಿಸಿಕೊಳ್ಳಬೇಕಾಗಿತ್ತಂತೆ ! ನೋಡಿದಿರಾ ಹೇಗಿದೆ ಎಂತ !!

ಹೊತ್ತಾಗಿ ಹೋಯಿತು; ಅಡಿಗೆ ಮಾಡಬೇಕು-ಇನ್ನೊಮ್ಮೆ ಬಿಡುವಿದ್ದಾಗ ಬರೆಯುತ್ತೇನೆ.

ನಿಮ್ಮ,
........

ನಲಿನಿ ,

ಬಹಳ ದಿವಸಗಳಾದವು ನಿನ್ನ ಕಾಗದಗಳೊಂದೂ ಬಾರದೆ. ಏಕೆ ಬರೆಯುವುದಿಲ್ಲ ? ಕಣ್ಮರೆಯಾದೊಡನೆಯೇ ಮರೆತುಹೋಯಿತೇನು ? ಸಹಜ; ಬೇಕಾದಷ್ಟು ಹೊಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳ್ಳಿಯ ಸ್ನೇಹಿತೆಯೊಬ್ಬಳನ್ನು ಜ್ಞಾಪಿಸಿಕೊಳ್ಳುವುದು ಕಷ್ಟ. ಆದರೆ ನೀನೆಷ್ಟು ನನ್ನನ್ನು ಮರೆಯುವುದಕ್ಕೆ ಯತ್ನಿಸಿದರೂ ಯತ್ನದಲ್ಲಿ ಸಫಲತೆಯನ್ನು ಪಡೆದರೂ ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು 'ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೇನೆ' ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೆ ನಾನೇ ಅಲ್ಲಿಗೆ ಬಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಡನೆ ಮಾತಿಗಾಗಿ ಉಪಯೋಗಿಸಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರಲಾರೆ. ಏಕೆಂದರೆ ಚಿಕ್ಕವರಾಗಿರುವಾಗ ನಾನು

೮೫