ಪುಟ:ಕಂಬನಿ-ಗೌರಮ್ಮ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ಕೀಟಲೆ ಮಾಡತೊಡಗಿದರೆ ನೀನೂ ಪಾರ್ವತಿಯ ಹೆದರಿ ನಾನು ಕೇಳಿದುದನ್ನು ಕೊಡುತ್ತಿದ್ದಿರಿ.

ನೆನಪಿದೆಯೇ ನಲಿನಿ!-ಆಗಿನ ಆಟ, ತಮಾಷೆ, ಜಗಳ, ನಗು ಎಲ್ಲಾ! ಆಗ ನಾವು ಶಾಲೆಯ ಹಿಂದಿನ ದಿಣ್ಣೆಯ ಮೇಲೆ ಕುಳಿತು ನನ್ನ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು ! ನಾವು ಕಲ್ಪಿಸಿ, ನೋಡಿ ನಲಿಯುತ್ತಿದ್ದ ಹಗಲು ಕನಸುಗಳ ಸ್ಮೃತಿ! ಆಗ ನಾವು ಜೀವನವು ಸುಖ-ಸಂತೋಷಮಯ ಎಂದು ತಿಳಿದಿದ್ದೆನಲ್ಲ ನಲಿನಾ ! ಈಗ ನಮ್ಮೆಲ್ಲೆಷ್ಟು ಜನರು ಆ ಭಾವನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನನ್ನ ಗೆಳತಿ ಸೀತೆಯನ್ನು ನೋಡು-ಅವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿಸುತ್ತಿರುವ ಯಾತನೆಗಳೆಲ್ಲಿ! ನಾವೆಂದಾದರೂ ಅವಳ ಗತಿ ಹೀಗಾಗಬಹುದೆಂದು ಎಣಿಸಿದ್ದೆವೇ? ಕ್ಲಾಸಿನಲ್ಲಿ ಹುಚ್ಚಿ ಎಂದು ನಾವು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು-ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟಿದ್ದಾಳೆ. ಅವಳ ಮಾತುಗಳನ್ನು ಕೇಳಲು ಜನರು ಹಾತೊರೆಯುವುದನ್ನು ನೋಡಿದರೆ 'ಅಂದಿನ ಉಮಾ ಇವಳೇನು?' ಎನ್ನಿಸುತ್ತದೆ. 'ಮದುವೆಯಾಗುವುದೇ ಇಲ್ಲ' ಎನ್ನುತ್ತಿದ್ದ ಶಾಂತೆಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕ್ಲಾಸಿನಲ್ಲಿ ಮೊದಲನೆಯವಳಾಗಿ ಬುದ್ದಿವಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲೆಗೆ ಅತ್ತೆಯ ಮನೆಯಲ್ಲಿ ದಡ್ಡೆ, ಮೂದೇವಿ ಎಂದು ಬಿರುದುಗಳು ಬಂದಿವೆ.

ಇವುಗಳೆಲ್ಲವುಗಳಿಗಿಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಲಿನಾ-ಅದೂ ನಮ್ಮ ಪ್ರೀತಿಯ ಪಾರ್ವತಿಯ ವಿಷಯ-ಹೇಗದನ್ನು ಬರೆಯಲಿ ಹೇಳು?

ಸೌಂದರ್ಯ, ಗುಣ, ನಡತೆಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆದಿದ್ದ ಪಾರ್ವತಿ ವಿಧವೆಯಾದದ್ದೂ, ನಾಗೇಶರಾಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರವನ್ನು ಚಿತ್ರಿಸಿದ್ದೆವು ನಲಿನಾ ! 'ನಮ್ಮ ಸುಂದರಿ,