ಪುಟ:ಕಂಬನಿ-ಗೌರಮ್ಮ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜನ ರಾಣಿ ಕಿರೀಟ ಧಾರಿಣಿ'ಯಾಗುವಳೆಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳೀಗ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವಳು ನಲಿನಾ-ರಾಯರ ಪಾಪದ ಪ್ರತಿಫಲವಾಗಿ. ಇದೇ ನೋಡು-ನಮ್ಮ ಸಮಾಜದ ನ್ಯಾಯ. ನಮ್ಮ ಜಾತಿ, ನೀತಿ, ಸಮಾಜ ಉತ್ತಮವೆಂದು ಹೇಳಿಕೊಂಡು ನಾವೆಷ್ಟು ಸಲ ಉಸಳೊಡನೆ ಜಗಳವಾಡಿಲ್ಲ ! ಮುಸಲ್ಮಾನ ಜಾತಿಯವಳೆಂದು ಎಷ್ಟು ಸಾರಿ ಉನ್ನೀಸಳನ್ನು ತಿರಸ್ಕರಿಸಿಲ್ಲ! ಊರ ತುಂಬ ನಮ್ಮವರ ಮನೆಗಳಿದ್ದೂ ಪಾರ್ವತಿಗೆ ಬಾಗಿಲನ್ನು ತೆರೆಯುವವರಿರಲಿಲ್ಲ. ನಮ್ಮವರ ಹೃದಯದಲ್ಲಿ ಜಾತಿಗಲ್ಲದೆ ದಯೆಗೆ ಎಡೆಯಿಲ್ಲ. ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ. ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೊಡ್ಡ ತನದ ಕುರುಹು.

ಉತ್ತಮ, ಅತ್ಯುತ್ತಮ ಜಾತಿಯು ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ತೋರಿಸಿಕೊಟ್ಟಾಗ ಕೈಹಿಡಿದು ಆದರದಿಂದ ಆಶ್ರಯವಿತ್ತವಳು ಯಾರು ಗೊತ್ತೇ ? ಉನ್ನೀಸ! ಮ್ಲೇಂಛಳೆಂದು ನಾವು ನಕ್ಕು ತಿರಸ್ಕರಿಸುತ್ತಿದ್ದ ಉನ್ನೀಸ ! ಈಗ ಹೇಳು ನಳಿನಾ, ಉತ್ತಮರು ಯಾರೆಂದು ?

ಊರವರೆಲ್ಲರೂ ಪಾರ್ವತಿಯನ್ನು ಮುಸಲ್ಮಾನ ಜಾತಿಗೆ ಸೇರಿದಳೆಂದು ತಿರಸ್ಕರಿಸುತ್ತಿರುವರು. ಮೊದಲೇ ನನಗೆ ಅವಳು ಹಾಗಾಗುವಳೆಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯತ್ನವನ್ನೂ ಮಾಡಲಿಲ್ಲವೇಕೆ ? ಎಂದು ನಾನು ಕೇಳಿದೆ. ಅದಕ್ಕಾಗಿ ಪಾರ್ವತಿಯ ಪಕ್ಷವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೆರೆಕರೆಯವರು ನನ್ನೊಡನೆ ಮಾತಾಡುವುದಿಲ್ಲ.

ಅಪರಾಧಿ ಯಾರು ನಲಿನಾ ? ಪಾರ್ವತಿ ರಜಿಯಾ ಆಗುವುದಕ್ಕೆ ಹೊಣೆ ಯಾರು? ಅವಳೇ? ರಾಯರೆ? ಅಥವಾ ನಮ್ಮ ಕ್ರೂರ ಕಠೋರ ಸಮಾಜವೇ ?

೮೭