ಪುಟ:ಕಂಬನಿ-ಗೌರಮ್ಮ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಮುದುಕ ಹೆಚ್ಚಿನ ಮುನ್ನುಡಿ ಯಾವುದನ್ನೂ ಬೆಳೆಯಿಸದೆ ಹೇಳಲು ತೊಡಗಿದ:

“ಇದು ಮೂವತ್ತು ವರ್ಷಗಳ ಹಿಂದಿನ ಮಾತು. ನಾನೀಗ ಯಾರ ವಿಷಯವಾಗಿ ಹೇಳಬೇಕೆಂದಿರುವೆನೋ ಅವನಾಗ ಇಪ್ಪತ್ತೈದು ವರ್ಷ ಪ್ರಾಯದ ಹೃಷ್ಟಪುಷ್ಟನಾದ ಯುವಕನಾಗಿದ್ದನು. ಒಲು ಚಿಕ್ಕ ಪ್ರಾಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು, ಬೇರೆಯವರ ಮನೆಯಲ್ಲಿ ಬೆಳೆದಿದ್ದ. ಎಷ್ಟಾದರೂ ಬೇರೆಯವರು. ಹೊಟ್ಟೆ ಬಟ್ಟೆಗೆ ಕೊಡುವುದೇ ಅವರಿಗೆ ಕಷ್ಟ. ಇನ್ನು ವಿದ್ಯೆಗೆಲ್ಲಿಂದ ಬರಬೇಕು ಹಣ! ಏನೋ ಅವನನ್ನು ಸಾಕಿದವನ ಹೆಂಡತಿ ಒಳ್ಳೆಯವಳು. ಅವಳ ದಯೆಯಿಂದ ಆತ ಸ್ವಲ್ಪ ಓದುಬರಹಗಳನ್ನು ಕಲಿತ; ಅಷ್ಟೇ ಆವನ ವಿದ್ಯಾಭ್ಯಾಸ. ಎಂಟು ಹತ್ತು ವರ್ಷ ವಯಸ್ಸಾದಂದಿನಿಂದ ಅವನಿಗೆ ಆ ಮನೆಯವರ ಕೆಲಸ ಸುರುವಾಯ್ತು. ಮೊದಮೊದಲು ಕರುಗಳನ್ನು ಕಾಯುತ್ತಿದ್ದ. ದೊಡ್ಡವನಾಗುತ್ತ ಬಂದಂತೆ ಕೆಲಸಗಳೂ ಹೆಚ್ಚು ಹೆಚ್ಚಾಯ್ತು. ಆದರವನಿಗೆ ಕೆಲಸವೆಂದರೆ ಬೇಸರವಿಲ್ಲ. ಬೆಳಗಿನಿಂದ ರಾತ್ರಿಯವರೆಗೂ ದುಡಿಯುತ್ತಿದ್ದ. ಅವನಂಥ ನಂಬಿಕೆಯ ಕಷ್ಟಗಾರನಾದ ಆಳು ಮತ್ತೆಲ್ಲಿ ದೊರೆಯಬೇಕು !ಅದೂ ಸಂಬಳವಿಲ್ಲದೆ !! ಮನೆಯವರಿಗೂ ಅವನೆಂದರೆ ವಿಶ್ವಾಸ ಆದರ !

“ಹೀಗೆ ದಿನಗಳೊಂದೊಂದಾಗಿ, ವರ್ಷಗಳು ಕಳೆದುವು. ಅವನೂ ಬೆಳೆಯುತ್ತ ಬಂದೆ. ಕಷ್ಟದಿಂದ ಬೆಳೆದ ಆರು ಅಡಿ ಎತ್ತರದ ಗಟ್ಟಿಮುಟ್ಟು ಶರೀರ, ಆರೋಗ್ಯದಿಂದ ತುಂಬಿದ ಗಂಭೀರವಾದ ಮುಖ, ಚಟುವಟಿಕೆಯಿಂದ ತುಂಬಿ ಮಿಂಚುತ್ತಿದ್ದ ಕಣ್ಣುಗಳು ಇವೆಲ್ಲಾ ಸೇರಿ, ಆ ಮನೆಯವರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ನೂರಾರು ಆಳುಗಳ ಮಧ್ಯದಲ್ಲಿದ್ದರೂ ಅವನನ್ನು ಎತ್ತಿ ಬೇರೆಯಾಗಿ ತೋರಿಸುತ್ತಿದ್ದುವು.

“ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವನಿರುವುದು ಮೊದಲಿನಂತೆ ಅವರ ಮನೆಯಲ್ಲೇ. ಊಟ, ತಿಂಡಿ ಎಲ್ಲಾ ಅವರಿಗಾದಂತೆ ಇವನಿಗೂ ದೊರೆಯುತ್ತಿತ್ತು. ಹೊಲದಲ್ಲಿ ಕೆಲಸ ತೀರಿಸಿ, ದನಗಳನ್ನು ಹಟ್ಟಿಗೆ