ಪುಟ:ಕಂಬನಿ-ಗೌರಮ್ಮ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೂಡಿಸಿ, ಹಾಲು ಕರೆದು, ಕರುಗಳನ್ನು ಬೇರೆಯಾಗಿ ಕಟ್ಟಿ, ಹುಲ್ಲುಹಾಕಿ ಮನೆಗೆ ಬರುವಾಗ ದೀಪಹತ್ತಿಸುವ ಸಮಯವಾಗುತ್ತಿತ್ತು. ಆ ಕೆಲಸವೂ ಅವನಿಗೇ. ದೀಪ ಹತ್ತಿಸಿ ಆಯಿತು ಎಂದರೆ ಮನೆಯ ಚಿಕ್ಕ ಮಕ್ಕಳ ಕೈಕಾಲು ತೊಳೆಸಬೇಕು; ಇದು ಅವನ ದಿನಚರಿಯ ಕೆಲಸಗಳಲ್ಲಿ ಕೊನೆಯದು. ಇಷ್ಟಾಗುವಾಗ ಏಳುವರೆ ಗಂಟೆಯಾಗುತ್ತಿತ್ತು. ಕೈ ಕಾಲು ತೊಳೆಯಿಸಿಕೊಂಡು ಮಕ್ಕಳು ಓದುವುದಕ್ಕೆ ಕುಳಿತರೆಂದರೆ ಇವನೂ ಹೋಗಿ ಒಂದು ಮಾಲೆಯಲ್ಲಿ ಕುಳಿತು, ಆ ಮಕ್ಕಳ ಪುಸ್ತಕಗಳನ್ನು ತಿರುವಿಹಾಕುತ್ತಿದ್ದ. ಅದರಿಂದಲೇ ಚಿಕ್ಕಂದಿನಲ್ಲಿ ಕಲಿತ ಸ್ವಲ್ಪ ಓದುಬರಹ ಮರೆತಿರಲಿಲ್ಲ.

“ಒಂಬತ್ತು ಗಂಟೆಗೆ ಅವನಿಗೆ ಊಟ ಸಿಕ್ಕುತ್ತಿತ್ತು. ಆಗ ಊಟ ಮಾಡಿ ಮಲಗಿದರೆ ಪುನಃ ಬೆಳಗಿನ ನಾಲ್ಕು ಗಂಟೆಗೆ ಎದ್ದು ಕೆಲಸಕ್ಕೆ ಪ್ರಾರಂಭ.

"ಒಂದು ದಿನದಿಂದ ಇನ್ನೊಂದು ದಿನಕ್ಕೆ ವ್ಯತ್ಯಾಸವಿಲ್ಲದಂತೆ ಇದೇ ತರದ ಕಾರ್ಯಕ್ರಮ ಆವನ ಜೀವನದಲ್ಲಿ. ಆಗ ತನಗೀತರದ ಜೀವನದಲ್ಲಿ ತೃಪ್ತಿಯೋ, ಅತೃಪ್ತಿಯೋ ಎಂದು ಯೋಚಿಸಲು ಸಹ ಸಮಯವಿರಲಿಲ್ಲ. ಇದ್ದರೂ ಆ ತರದೆ ಯೋಚನೆ ಎಂದೂ ಅವನಲ್ಲಿ ಉಂಟಾಗಿರಲಿಲ್ಲ. ಅವನ ಈ ತರದ ಜೀವನದಲ್ಲಿ ಸ್ವಲ್ಪ ಸ್ವಲ್ಪವಾಗಿ ಬಹುಶಃ ಅವನಿಗೆ ತಿಳಿಯದಂತೆಯೇ ಪರಿವರ್ತನವಾಗತೊಡಗಿದಾಗ ಅವನಿಗೆ ೨೪ ವರ್ಷದ ವಯಸ್ಸು ನಡೆಯುತ್ತಿತ್ತು.

“ಆ ವರ್ಷ ಅವರ ಗದ್ದೆಯ ಕೆಲಸ ಬೇಗ ತೀರಿಹೋಗಿತ್ತು. ಅದರಿಂದ ಅವನಿಗೆ ಹಿಂದೆ ಎಂದೂ ದೊರೆಯದಷ್ಟು ವಿರಾಮ. ಮತ್ತೆ ಅದೇ ವರ್ಷ ಆ ಮನೆಯವರ ಹಳೆಯ ಮೇಸ್ತ್ರಿಯೂ ಸತ್ತುಹೋದುದರಿಂದ ಅವನಿಗೇ ಆ ಕೆಲಸವೂ ದೊರೆಯಿತು. ಈಗವನಿಗೆ ಬೇರೆಯವರಿಂದ ಕೆಲಸ ಮಾಡಿಸುವುದಲ್ಲದೆ ತಾನೇ ಮಾಡಬೇಕಾಗಿರಲಿಲ್ಲ. ಇದರ ಜೊತೆಗೆ ಹಿಂದಿನ ಮೇಸ್ತ್ರಿಗಿದ್ದಷ್ಟಲ್ಲದಿದ್ದರೂ ಸ್ವಲ್ಪ ಸಂಬಳ ಬೇರೆ ಸಿಕ್ಕತೊಡಗಿತು.

೯೧