ಪುಟ:ಕಂಬನಿ-ಗೌರಮ್ಮ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ಮುಗುಳುನಗು ನಗುತ್ತ ತನ್ನನ್ನೇ ಕೂಗುತ್ತಿದ್ದ ಅವಳೆಡೆಗೆ ಸೇರಲು ಹತ್ತಿರದಲ್ಲೇ ಇದ್ದ ಬಾವಿಗೆ ಹಾರಿದ.

“ಬಾವಿಗೆ ಹಾರಿದ-ಸತ್ತು ಅವಳೆಡೆಯನ್ನು ಸೇರುವ ಸಲುವಾಗಿ; ಆದರೆ ಅವನು ಸಾಯಲಿಲ್ಲ-ಸಾಯಲಿಲ್ಲ ...."

ಮುದುಕ ಇಷ್ಟು ಹೇಳಿ ಸ್ವಲ್ಪ ಹೊತ್ತು ಸುಮ್ಮನಾದ. ಕತೆ ಕೇಳುವ ಮೊದಲು ಏನೋ ಎಂತಿದ್ದ ನಾವು, ಕೇಳಿ ಈಗ ಅಳುವಂತಾಗಿ ಹೋಗಿದ್ದೆವು. ನಮ್ಮ ಕಣ್ಣೀರು ನೋಡಿ ಮುದುಕನೇನೆಂದುಕೊಳ್ಳುವನೆ ಎಂದು ಮುಖ ಮರೆಮಾಡಿ ಕಣ್ಣೊರಸಿಕೊಂಡೆವು. ಆದರೆ ಮುದುಕ ನಮ್ಮ ಕಡೆ ನೋಡುತ್ತಿರಲಿಲ್ಲ. ಶೂನ್ಯವನ್ನು ನಿಟ್ಟಿಸುತ್ತಿದ್ದ. ಅವನ ಕಣ್ಣುಗಳಲ್ಲಿ ವೇದನೆಯು ತುಂಬಿತ್ತು. ಬಹುಶಃ ಕತೆಯ 'ಅವನು' ಮುದುಕನ ಸಂಬಂಧಿಯೋ ಏನೋ ಎನ್ನಿಸಿತು-ನನಗವನ ಮುಖ ನೋಡಿ. 'ಅವನ' ಅವಸ್ಥೆ ಏನಾಯಿತು?- ಎಂದು ನಮಗೆಲ್ಲಾ ಕುತೂಹಲವಿದ್ದರೂ ನಡುಕ ತಾನಾಗಿ ಪುನಃ ಪ್ರಾರಂಭಿಸುವ ತನಕ ಸುಮ್ಮನಿದ್ದೆವು.

ತಾನಾಗಿಯೆ ಮುದುಕ ಸ್ವಲ್ಪ ಹೊತ್ತಿನ ತರುವಾಯ ಮುಂದು ವರಿಸಿದ :-

"ಅವಳ ಚಿಕ್ಕಪ್ಪ 'ಅವಳೇಕೆ ಇನ್ನೂ ಬಂದಿಲ್ಲ' ಎಂದು ನೋಡಲು ಬಂದವನು ಅವನು ಬಾವಿಗೆ ಹಾರುವುದನ್ನು ನೋಡಿ ಎತ್ತಿ ಹಾಕಿದ. ಕ್ರಮಪ್ರಕಾರವಾಗಿ ಕೋರ್ಟಿನಲ್ಲಿ ವ್ಯಾಜ್ಯವೂ ಆಯಿತು. ಆದರೆ ಅದೊಂದೂ ಅವನಿಗೆ ತಿಳಿಯದು. ಅವನಿಗೆ ಹುಚ್ಚೆಂದು ಜನರು ಹೇಳುತ್ತಿದ್ದರು. ಹುಚ್ಚೆಂದೇ ಅವನಿಗೆ ಫಾಸಿಯಾಗಲಿಲ್ಲ. ಆಗಿದ್ದರೆ ಒಳ್ಳೆಯದಾಗುತ್ತಿತ್ತು. ಬಾವಿಯಲ್ಲಿ ಬಿದ್ದು ಅವಳ ಹತ್ತಿರ ಹೋಗಲಾಗದಿದ್ದರೆ ಫಾಸಿಯಾದರೂ ಅವಳ ಹತ್ತಿರ ಒಯ್ಯಬಹುದೆಂದು ಅವನೆಣಿಸಿದ್ದ; ಪಾಪಿ! ಅಷ್ಟೊಂದು ಭಾಗ್ಯವು ಅವನಿಗೆ !!

"ಹುಚ್ಚನಲ್ಲದಿದ್ದರೂ ಹುಚ್ಚನೆನ್ನಿಸಿಕೊಂಡು ೩೦ ವರ್ಷ ಹುಚ್ಚರ ಆಸ್ಪತ್ರೆಯಲ್ಲಿ ಕಳೆದ. '೩೦ ವರ್ಷ ಹೇಗೆ ಕಳೆದ?' ಎಂದು ಕೇಳಬೇಡಿ.