ವಿಷಯಕ್ಕೆ ಹೋಗು

ಪುಟ:ಕಂಬನಿ-ಗೌರಮ್ಮ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೦

ಆದರೀಗ ಹೇಳದಿದ್ದರಾಗುವದೇ? ಅಕ್ಕನಿಗೆ ನಾನೆಂದರೆ ಬಲು ಪ್ರೀತಿ. ನಾನು ಸ್ವಲ್ಪ ಬೇಸರಪಟ್ಟುಕೊಂಡರೆ ಅವಳಿಗೆ ಬಲು ಬೇಸರವಾಗುವುದು. ಅಂತಹ ಪ್ರೀತಿಪಾತ್ರಳಾದ ಅಕ್ಕನನ್ನು ವಂಚಿಸುವುದು ನನಗೇ ನಾಚಿಕೆಯಾಗುವುದು.. ಏನು ಮಾಡಲಿ ?......

ಕೃಪಾ ನಾಲ್ಕು ಗಂಟೆಗೆ ಬರುವಳಂತೆ. ಬಂದರೆ ಅವನ ಸುದ್ದಿ ಅವಳಿಂದ ತಿಳಿದುಕೊಳ್ಳಬಹುದು. ಆದರೆ ಅವಳೊಡನೆ ಹೇಗೆ ಹೇಳಲಿ? ಕೇಳಿದರೆ ನನ್ನ ಮಾತುಗಳಿಂದ ನನ್ನ ಮನಸ್ಸನ್ನವಳು ಊಹಿಸಿದರೆ ಇಲ್ಲ-ಕೃಪಾ ಆ ತರದ ಆಲೋಚನೆಗಳಿಗೆ ಎಡೆಕೊಡತಕ್ಕವಳಲ್ಲ-ಅವಳೊಡನೆ ಹೇಗಾದರೂ ಕೇಳಿಯೇ ಬಿಡುವೆನು-ಕೇಳದೆ ಹೇಗೆ ತಾನೆ ಇರಲಿ.. ಅಯ್ಯೋ! ನಾಲ್ಕು ಗಂಟೆ ಬೇಗ ಬರಬಾರದೇ ? ಪ್ರತಿಯೊಂದು ನಿಮಿಷವೂ ಒಂದೊಂದು ಯುಗವಾಗಿ ಏಕೆ ಬೆಳೆಯುತ್ತಿದೆ......

೪-೭-೨೮

ಕೃಪಾ ಬಂದೂ ಆಯಿತು. ಅವಳೊಡನೆ ಕೇಳಿಯೂ ಆಯಿತು. ನಿನ್ನೆ ರಾತ್ರಿಯೆಲ್ಲ ಅದೇ ಸುದ್ದಿ.. ಕೃಪೆಗೆ ಹೇಳಿ ಹೇಳಿ ಬೇಸರಬಂದು ಹೋಗಿದೆ. ನನಗೆ .. ಆದರೆ ನನಗೆ.. ಕೇಳಿದಷ್ಟೂ ತೃಪ್ತಿಯಿಲ್ಲ. ಇನ್ನೊಮ್ಮೆ ಕೇಳಲೇ-ಕೇಳಿದರೆ ಅವಳೇನೆಂದು ತಿಳಿದುಕೊಳ್ಳುವಳು! ಏನಾದರೂ ತಿಳಿದುಕೊಳ್ಳಲಿ-ಕೇಳಿಯೇ ಬಿಡುವೆನು.. ಬೇಡ ..ಕೇಳಲಾರೆ ..ಉರಿಯುವ ಹೃದಯವೇ ಸ್ವಲ್ಪ ಸಹಿಸು.. ಕೃಪಾ ಕೂಗುತ್ತಿರುವಳು..ಏಕಿರಬಹುದು ..ನನಗೊಂದು ಕಾಗದವಿದೆಯಂತೆ. ಯಾರ ದಾಗಿರಬಹುದು! ಅವನದೇ? ಅಲ್ಲದೆ ಹೋದರೆ.. ನನ್ನ ಆಸೆಗೆ ಎಂತಹ ಆಘಾತ! ಹೌದು-ಅವನದೇ...ಏನೆಂದು ಬರೆದಿರುವನು? ಬರುವನಂತೆ..ನಾಳೆ ಬರುವನಂತೆ ..ಹೃದಯವೇ ಸಂತೋಷದಿಂದ ಬಿರಿಯದಿರು.. ನಾಳೆ! ಎಂದಿಗೆ ನಾಳೆಯಾಗುವುದು! ಈ ದಿನ ಬೇಗನೆ ಏಕೆ ಮುಗಿಯುವದಿಲ್ಲ.. ನಿದ್ರೆಗೂ ನನ್ನ ಮೇಲೆ ದಯವಿಲ್ಲವೇಕೆ?......