ಪುಟ:ಕಂಬನಿ-ಗೌರಮ್ಮ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಗ್ರಹಿಸಿದನೋ ತಿಳಿಯದು..ಸಾಯಂಕಾಲ ನಾವೆಲ್ಲರೂ ತಿರುಗಾಡುವುದಕ್ಕೆ ಹೊರಟೆವು. ಅಂದಿನ ಸಾಯಂಕಾಲ ಸೃಷ್ಟಿದು ಸೌಂದರ್ಯದಿಂದ ಮೆರೆದಂತೆ ಇನ್ಯಾವಾಗಲೂ ಮೆರೆದಿದ್ದುದನ್ನು ನಾನು ನೋಡಲಿಲ್ಲ. ಬಹುಶಃ ನನ್ನೊಡನೆ ಅವನಿದ್ದುದರಿಂದ ಪ್ರಕೃತಿಯ ಅಂದು ನನ್ನ ಕಣ್ಣುಗಳಿಗೆ ಅಷ್ಟು ಮನೋಹರವಾಗಿ ತೋರಿರಬಹುದು. ಹೀಗೆಂದಿಗೂ ಹೇಳಲಾರೆ..ಆದರೆ ಆ ಸಾಯಂಕಾಲವು ಎಂದೆಂದಿಗೂ ನನ್ನ ಮನಸ್ಸಿನಿಂದ ಮಾಯವಾಗಲಾರದು... ಕೃಪಾ ಮತ್ತು ಅಕ್ಕ ಸ್ವಲ್ಪ ಮುಂದೆ ಹೋಗುತ್ತಿದ್ದರು. ನಾವಿಬ್ಬರೂ ಜೊತೆಯಲ್ಲಿ ಸ್ವಲ್ಪ ಹಿಂದಿನಿಂದ ಹೋಗುತ್ತಿದ್ದೆವು. ಕೃಪೆಯೂ ಅಕ್ಕನೂ ಏನೇನು ಮಾತುಗಳಾಡುತ್ತಿದ್ದರೋ ತಿಳಿಯದು-ಅವರ ಮಾತುಗಳೆಲ್ಲ ಕೇಳುತ್ತಲಿದ್ದರೂ ಮನಸ್ಸೆಲ್ಲವೂ ಬೇರೆ ಕಡೆ ಇದ್ದುದರಿಂದ ಮಾತುಗಳ ಅರ್ಥವಾಗುವ ಸಂಭವವಿರಲಿಲ್ಲ. ಹೋಗುತ್ತಿದ್ದಂತೆಯೇ ಅವನು ನಿಂತ. ನಾನೂ ಅವನೊಡನೆಯೇ ನಿಂತೆ. ಅಕ್ಕನೂ ಕೃಪೆಯೂ ಮುಂದೆ ಹೋಗುತ್ತಿದ್ದವರು ನಾವು ನಿಂತುದನ್ನು ನೋಡಲಿಲ್ಲ. ಮಾತನಾಡುತ್ತ ಇನ್ನೂ ಮುಂದೆ ಹೋದರು. ಎಷ್ಟು ಹೊತ್ತು ನಾವಿಬ್ಬರು ಹಾಗೆ ನಿಂತಿದ್ದೆವೋ ತಿಳಿಯದು. ಕೊನೆಗೆ ಅವನೇ ಮೌನ ಭಂಗವಾಡಿ ಕೇಳಿದೆ. 'ಸರಸ, ಬೆಳಗ್ಗೆ ಹಾಗೇಕೆ ಮಾಡಿದೆ ?' ನಾನು ಮಾತನಾಡಲಿಲ್ಲ. 'ಸರಸಿ, ಮಾತೇಕೆ ಆಡುವದಿಲ್ಲ-ನೀನೇಕೆ ಹಾಗೆ ಮಾಡಿದೆಯೋ ನನಗೆ ಅದು ತಿಳಿಯದು. ಆದರೆ ಅದರಿಂದ ನನ್ನ ಮೇಲಾದ ಪರಿಣಾಮ..ಸರಸ.. ನನ್ನ ಸರಸ ' ಮುಂದವನ ಬಾಯಿಂದ ಮಾತುಗಳು ಹೊರಡಲಿಲ್ಲ. ನನ್ನನ್ನು ತನ್ನೆಡೆಗೆ ಎಳೆದುಕೊಂಡು ಮುತ್ತಿನ ಮಳೆಯನ್ನು ಸುರಿಸಿಬಿಟ್ಟ. ಎಷ್ಟು ಹೊತ್ತು ಹಾಗೆಯೇ ಕಳೆಯಿತೋ ಹೇಳಲಾರೆ. . ದೂರದಿಂದ ಅಕ್ಕನು ಕೂಗುವದು ಕೇಳಿದೊಡನೆ ಅವನು ನನ್ನ ಕೈಬಿಟ್ಟ-ನಾನು ನಿಲ್ಲಲಾರದೆ ಕುಳಿತುಬಿಟ್ಟೆ. ಆಗವನು ಪ್ರೇಮ ಪೂರ್ಣವಾದ ಸ್ವರದಿಂದ ಹೇಳಿದ ನನ್ನ ಸರಸಾ, ಕ್ಷಮಿಸು; ಇನ್ನು ಮುಂದೆದಿಗೂ ಹೀಗೆ ಮಾಡುವುದಿಲ್ಲ-ಇದೊಂದು ಬಾರಿ ಕ್ಷಮಿಸು.' ಇದಕ್ಕೆ ನಾನು ಉತ್ತರ ಕೊಡುವ ಮೊದಲೇ ಅಕ್ಕ ಬಂದಳು. ಹೆಚ್ಚೇನೂ ಮಾತನಾಡದೆ ನಾವ್ರ ಮನೆಗೆ ಬಂದೆವು.