ಮದುವೆಯಾಗಲು ನನ್ನನ್ನವನು ಮರೆಯಲಿ' ಎಂದು ಪ್ರಾರ್ಥಿಸುತ್ತಿದ್ದ ನಾನು ಇಂದೇಕೆ ಅವರ ಮದುವೆಯ ವರ್ತಮಾನ ಕೇಳಿ ದುಃಖಿತಳಾಗಬೇಕು? ನನಗಾಗಿ ಅವನೇಕೆ ಮದುವೆಯಾಗದಿರಬೇಕು? ನಾನು ಮನಸ್ಸನ್ನು ಎಷ್ಟೆಷ್ಟು ಕಾರಣಗಳನ್ನು ಕೇಳಿಕೊಂಡರೂ ಹೃದಯಾಂತರಾಳದಿಂದ ಸಣ್ಣದನಿಯೊಂದು 'ಅಯ್ಯೊ' ಎನ್ನುವುದೇಕೆ ? ಆಗ..ಅವನು ಮದುವೆಯಾಗಲಿ.. ಪರಮಾತ್ಮನು ಅವರನ್ನೂ ಕಾಪಾಡಲಿ..ಅವರ ಸಂಸಾರ ಸುಖಮಯವಾಗಲಿ......
೨೧-೩-೩೪
ನಾಳೆ ಅವನ ಹೆಂಡತಿಯನ್ನ ಮಗುವನ್ನೂ ಕರೆದುಕೊಂಡು ಬರುವನಂತೆ. ದೇವಾ, ಅವನು ಬಂದಾಗ ಅವನ ಹೆಂಡತಿಯು ಇದಿರಿನಲ್ಲಿ ನನ್ನ ಅಧೈರ್ಯ ಪ್ರಕಟವಾಗಮತೆ ಅನುಗ್ರಹಿಸು. ಹೃದಯವೇ-ಸ್ವಲ್ಪ ಶಾಂತವಾಗು.. ಮನಸ್ಸೇ ಉದ್ವೇಗವನ್ನು ಸಹಿಸಿಕೋ. ಅವನೊಡನೆ ಏನೆಂದು ಮಾತಾಡಲಿ.. ಈ ಮುಖವನ್ನು ಅವನಿಗೆ ಹೇಗೆ ತೋರಿಸಲಿ? ಪರಮಾತ್ಮಾ-ನನ್ನ ಕಣ್ಣುಗಳು ನಾಳೆ ಅವನಿದಿರಿನಲ್ಲಿ ನನ್ನ ಹೃದಯದ ಗುಟ್ಟನ್ನು ಹೊರಗೆಡವದಂತೆ ಕಾಪಾಡು ......
೨೨-೩-೩೪
ಅವನು ಹೆಂಡತಿ ಮಗುವಿನೊಡನೆ ಬಂದು ಕುಳಿತಿರುವನು. ಹೇಗೆ ಹೋಗಿ ಅವನಿಗೆ ಮುಖ ತೋರಿಸಲಿ! ಎನೆಂದು ಮಾತಾಡಲಿ! ಹೇಗೆ ಹೊರಗೆ ಹೋಗಲಿ? ಹೋಗದೆ ಇರಲಾಗುವುದೇ?..ಅವನು ಹೇಳುತ್ತಿರುವುದೇನು? 'ಚೆನ್ನಾಗಿರುವೆಯಾ ಸರಸಿ?'.. 'ಹೌದಪ್ಪ ಚೆನ್ನಾಗಿರುವೆನು. ನೀನು ಹೆಂಡತಿಯನ್ನೂ ಮಗುವನ್ನೂ ಕರೆತಂದುದು ಬಲು ಸಂತೋಷವಾಯಿತು...ಮಗುವಿನ ಹೆಸರೇನು? ಪ್ರಭೆ ಎಂತಲೇ-ಚೆನ್ನಾಗಿದೆ.. ನನ್ನ ಪ್ರೀತಿಯ ಹೆಸರದು..ಬಾಮ್ಮಾ ಪ್ರಭಾ.. ಮಗು ಎಷ್ಟು ಮುದ್ದಾಗಿದೆ? ನಾನು ಕರೆದೊಡನೆಯೇ ನಗುತ್ತ ನನ್ನೆಡೆಗೆ ಬರುತ್ತಿರುವಳಲ್ಲ. ಅವನ ಕಣ್ಣುಗಳಂತೆಯೇ ಇರುವ ತನ್ನ ಕಣ್ಣುಗಳಿಂದ ನನ್ನನ್ನು