ಪುಟ:ಕಂಬನಿ-ಗೌರಮ್ಮ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
....ಯಾರು ?

'ಹೇಶ,

ಬೆಳಗ್ಗೆ 'ನಿನಗೆ ಮದುವೆಯಾಗಿದೆಯೋ?'ಎಂದು ಕೇಳಿದೆ. ನಿನಗೆ ನನ್ನ ಪ್ರಶ್ನೆಯಿಂದ ಆಶ್ಚರ್ಯವಾದಂತೆ ತೋರಿತು. ನೀನು 'ಇಲ್ಲ' ಎಂದೆ. ನಿನ್ನ 'ಇಲ್ಲ' ಕೇಳಿ ನನಗೆ ನಿನಗಿಂತಲೂ ಹೆಚ್ಚಿನ ಆಶ್ಚರ್ಯವಾಯಿತು. ಬಹುಶಃ ಆ ಸ್ತ್ರೀಯನ್ನು ನೀನು ಮದುವೆಯಾಗಿರಬಹುದು ಎಂದಿದ್ದೆ.

ಕಳೆದ ರಜೆಯಲ್ಲಿ ನಿನ್ನನ್ನು ನಮ್ಮನೆಗೆ ಆಮಂತ್ರಿಸಿದೆ. ಊರಿಗೆ ಹೋಗಬೇಕು ಎಂದು ನೆವನ ಹೇಳಿ ನಮ್ಮನೆಗೆ ಬರಲಿಲ್ಲ ನೀನು. ಆದರೆ ನೀನು ಊರಿಗೆ ಹೋಗಲಿಲ್ಲ. ಇದೇ ಊರಲ್ಲಿದೆ; ಅದೂ ಚರಿತ್ರಹೀನಳಾದ ಸಿನಿಮಾ ನಟಿಯೊಬ್ಬಳೊಡನೆ.

ಮಹೇಶ, ಜನರ ಮುಖನೋಡಿ ಅವರ ಗುಣ ತಿಳಿದುಕೊಳ್ಳುವ ಶಕ್ತಿ ನನಗಿದೆ ಎಂದು ನನಗೆ ಹೆಮ್ಮೆಯಿತ್ತು. ಅದೇ ಎಂಟು ತಿಂಗಳ ಮೊದಲು ನಿನ್ನನ್ನು ಮೊಟ್ಟಮೊದಲು ನೋಡಿದಾಗ ನಿನ್ನ ವಿಷಯಗಳೊಂದೂ ತಿಳಿಯದಿದ್ದರೂ ನಿನ್ನನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡೆ. ಅಷ್ಟೊಂದು ನಂಬಿಕೆ ಹುಟ್ಟಿಸಿತು ನಿನ್ನ ಮುಖ. ನಿನ್ನ ಯಾತನಾಮಯವಾದ ಆ ದೊಡ್ಡ ದೊಡ್ಡ ಕಣ್ಣುಗಳನ್ನು ನೋಡಿ 'ಪಾಪ, ನೊಂದ ಜೀವಿ; ಪೂರ್ವೋತ್ತರಗಳನ್ನು ಕೇಳಿ ನೋಯಿಸಬಾರದು' ಎಂದುಕೊಂಡಿದ್ದೆ. ಅಂದಿನ ಹೆಮ್ಮೆ ಎಲ್ಲಾ ಈಗ ಹುಡಿಯಾಗಿ ಹೋಯ್ತು, ಮಹೇಶ.