ಪುಟ:ಕಂಬನಿ-ಗೌರಮ್ಮ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦

ಹೋಗುತ್ತೇನೆ. ಬಹುಶಃ ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಬಹುದು. ಆಗ ನನ್ನೊಡನೆ ಮಾತಾಡಲೆತ್ನಿಸಿ ನಮ್ಮ ಹಿಂದಿನ ಆದರ್ಶ ಸ್ನೇಹದ ನೆನಪನ್ನು ಕೆಡಿಸಬೇಡ, ಇದೊಂದೇ ನಿನ್ನಲ್ಲಿ ನನ್ನ ಆಗ್ರಹದ ಕೋರಿಕೆ.

ವಸಂತ'

ಕಾಗದ ಬರೆದಿಟ್ಟು ವಸಂತ ಹೊರಟುಹೋದ. ತಾನು ಜೀವಕ್ಕಿಂತ ಮಿಗಿಲೆಂದು ತಿಳಿದ ಗೆಳೆಯ, ನಡತೆ ಇಲ್ಲದವ ಎಂದು ಒಪಳ ನೊಂದುಕೊಂಡಿದ್ದ. ಹಾಗೆಯೇ ಹಿಂದುಮುಂದಾಲೋಚಿಸದೆ ಕಾಗದ ಬರೆದಿಟ್ಟು ಹೊರಟುಬಿಟ್ಟಿದ್ದ.

ಆ ಬೆಳೆದುಬಂದಿದ್ದ ಸ್ನೇಹವನ್ನು ಹೃದಯದಿಂದ ಕಿತ್ತೆಸೆಯವುದು ಮಾತ್ರ ಹೊರಟು ಬರುವಷ್ಟು ಸುಲಭವಾಗಿರಲಿಲ್ಲ. ತಾನು ಮಾಡಿದ್ದು ಸರಿ ಎಂದು ತನ್ನನ್ನು ತಾನೆ ಸಂತೈಸಿಕೊಂಡರೂ ಮನಸಿನ 'ಒಳಗಿನ ಒಳಗಿನ ಒಳದನಿಯೊಂದ' 'ನಿನ್ನದು ತಪ್ಪು' ಎಂದು ಚಚ್ಚುತ್ತಿತ್ತು.

ಸಾಯಂಕಾಲ ಇತರ ಸ್ನೇಹಿತರೊಡನೆ ಸಿನಿಮಾಕ್ಕೆ ಹೋದ. ಆದರೆ ಅದು ಪೂರೈಸುವತನಕ ಕೂರಲಾರದೆ ಎದ್ದವನು ನೇರವಾಗಿ ಹಾಸ್ಟೆಲ್ ಕಡೆಗೆ ಹೋದ. ಹೊರಗಿನಿಂದ ಮಹೇಶನ ರೂಮಿನಲ್ಲುರಿಯುವ ದಿನವನ್ನು ನೋಡಿದಾಗ ತಾನು ಹಾಸ್ಟೆಲ್ಲಿಗೆ ಬಂದಿರುವೆನೆಂದವನಿಗೆ ಬೋಧೆಯಾಯ್ತು. ಆಶಾಪೂರ್ಣದೃಷ್ಟಿಯಿಂದೊಮ್ಮೆ ಆ ರೂಮನ್ನು ನೋಡಿ ಹಿಂದಿರುಗಿದ. ಮತ್ತೆ ಎಲ್ಲೆಲ್ಲೋ ಸುತ್ತಾಡಿಕೊಂಡು ಮನೆಗೆ ಹೋಗುವಾಗ ಹತ್ತು ಹೊಡೆದುಹೋಗಿತ್ತು, ಒಳಗೆ ನುಗ್ಗುವಾಗ ಇನ್ನೂ ಎಚ್ಚತ್ತಿದ್ದ ಅವನ ಚಿಕ್ಕ ತಂಗಿ ನಲಿನಿ 'ಅಣ್ಣ, ಮಹೇಶ ನಿನಗೊಂದು ಕಾಗದ ಕೊಟ್ಟು ಹೋದ. ನಿನ್ನ ರೂಮಿನಲ್ಲಿಟ್ಟಿದ್ದೇನೆ' ಎಂದಳು.

ಮಹೇಶನ ಕಾಗದ! ಊಟಕ್ಕೆ ಬಾರೆನ್ನುತ್ತಿದ್ದ ತನ್ನ ತಾಯನ್ನು ಸಹ ಲಕ್ಷಿಸದೆ ರೂಮಿನ ಬಾಗಿಲನ್ನು ಹಾಕಿಕೊಂಡು ಓದತೊಡಗಿದ.