ಪುಟ:ಕಂಬನಿ-ಗೌರಮ್ಮ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂಗ್ಲೆಂಡಿಗೆ ಹೋಗಬಾರದೆಂಬ ಬಯಕೆ. ಏಕೆ ಹೋಗಬಾರದೆಂದರೆ ಕಾರಣ ಹೇಳಲು ಅವಳಿಗೆ ತಿಳಿಯದು. ಆದರೂ ಅವನು ಇಂಗ್ಲೆಂಡಿಗೆ ಹೋಗಬಾರದು ಎಂದು ಅವಳಿಗೆ. ಅವನು ಹೊರಡುವ ಮೊದಲು ನಮ್ಮನೆಗೆ ಬಂದಿದ್ದ. ನನಗೆ ಸರಿಯಾಗಿ ಗೊತ್ತಿಲ್ಲ-ಅವಳೂ ನನ್ನೊಡನೆ ಹೇಳಿಲ್ಲ. ಅವಳು ಅವನನ್ನು ಹೊಗಬಾರದೆಂದು ಪ್ರಾರ್ಥಿಸಿಕೊಂಡಳು ಎಂಬುದು ಕೇವಲ ನನ್ನ ಊಹೆ ಅಷ್ಟೆ. ಹಾಗೆ ಊಹಿಸಲು ನನಗೊಂದು ಕಾರಣವೂ ಇತ್ತು. ಪಾಪ ಮದುವೆ ಆದಂದಿನಿಂದ ಅವನೊಡನೆ ಒಂದು ಮಾತ್ರ ಆಡಿರಲಿಲ್ಲ. ಮದುವೆಯ ಸಮಯದಲ್ಲಿ ಅವಳಿಗೆ ಹನ್ನೊಂದು ವರ್ಷ ಸಹ ತುಂಬಿರಲಿಲ್ಲವೆಂದು ಮೊದಲೇ ಬರೆದಿದ್ದೇನೆ. ಗಂಡ ಎಂದರೆ ನಾಚಿಕೆ ಮಾಡುವ ವಸ್ತು. ಅವನು ಬಂದರೆ ಓಡಿ ಹೋಗಿ ಅವಿತುಕೊಳ್ಳಬೇಕು ಎಂದವಳ ಭಾವನೆ ಆಗ. ಮತ್ತವನು ವರ್ಷಕ್ಕೊಮ್ಮೆ ಎಲ್ಲಾದರೂ ಒಂದೆರಡು ದಿನಗಳ ಮಟ್ಟಿಗೆ ಬಂದರೆ ಪಾಪ ಅವನಿದರು ಸಹ ಹೋಗುತ್ತಿರಲಿಲ್ಲ. ಅವನು ಇಂಗ್ಲೆಂಡಿಗೆ ಹೋಗುವ ಮೊದಲು ಬಂದಾಗ ಮಾತ್ರ ಅವಳಾಗಿಯೇ ಅವನ ರೂಮಿಗೆ ಹೋದುದನ್ನು ನೋಡಿ, ಅವಳ ಹೊರಗೆ ಬರುವಾಗ ಅತ್ತು ಕೆಂಪಾದ ಅವಳ ಕಣ್ಣುಗಳನ್ನು ನೋಡಿ ಬಹುಶಃ ಅವಳು ವಿಲಾಯತಿಗೆ ಹೋಗಬಾರದೆಂದು ಅವನನ್ನು ಪ್ರಾರ್ಥಿಸಿರಬೇಕು ಎಂದು ನನ್ನ ಊಹನೆ. ಅವಳ ಮಾತಿಗೆ ಅವನು ಏನೆಂದನೋ ತಿಳಿಯದು. ಅಂತೂ ಅವನು ಹೊರಟುಹೋದ. ಅವನು ಹೋಗುವಾಗ ನಾವೆಲ್ಲರೆಣಿಸಿದಂತೆ ಅವಳು ಅವನಿದಿರು ಒರಲಿಲ್ಲ. ನಾನು ಅವಳನ್ನು ಕೂಗಲು ಹೋದೆ. ಅವಳ ರೂಮಿನ ಬಾಗಿಲು ಹಾಕಿತ್ತು. ಒಳಗಿನಿಂದ ಮೆಲ್ಲಮೆಲ್ಲನೆ ಅಳುವ ಶಬ್ಬವೂ ಕೇಳಿಸುತ್ತಿತ್ತು. ನನಗೂ ಅವಳನ್ನು ಆಗ ಕೂಗಲು ಮನಸ್ಸು ಬರಲಿಲ್ಲ. ಹಾಗೆಯೇ ಹೊರಗೆ ಬಂದೆ. ಅವಳ ಗಂಡ ಹೊರಟು ನಿಂತಿದ್ದ. ಪಾಪ ವಿನಾ ಮನೆಯವರೆಲ್ಲಾ ಇದ್ದರು. ಅವನ ಅವಳಿಲ್ಲದಿರುವುದನ್ನು ನೋಡಿದಂತೆ ತೋರಲಿಲ್ಲ, ಹೊರಟೇ ಹೋದ.

“ಆದಿನವೆಲ್ಲ ನಾನು ಪಾಪನ್ನ ನೋಡಲಿಲ್ಲ. ತಂದೆ ಒಂದು ಸಾರಿ 'ಎಲ್ಲಿ ಪಾಪ?' ಎಂದರು. ಚಿಕ್ಕಮ್ಮ 'ಅವಳ ರೂಮಿನಲ್ಲಿರಬಹುದು' ಎಂದುಬಿಟ್ಟರು. ಆಯಿತು ಅಷ್ಟೇ-

೧೧೩

15