ಪುಟ:ಕಂಬನಿ-ಗೌರಮ್ಮ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬನಿ

ಹುಬ್ಬಳ್ಳಿ ನಮ್ಮೂರ ಕಡೆಗೆ' ಎಂದು ಕಾಫಿ ಕೊಡಿಸಿದರು; ಕೂಡಿ ನಗು ಕುಡಿದೆವು. ಗಾಡಿ ಹೊರಡುವ ಸಮಯವಾಗಿತ್ತು. 'ಅಲ್ಲಿ ನೋಡಿ, ನಿಮ್ಮ ಮಾವ ಬರುತ್ತಿದ್ದಾರೆ' ಎಂದರವರು. ನಾನು ತಿರುಗಿ ನೋಡಿ, ನನ್ನ ಪರಿಚಿತರಾರನನ್ನೂ ಕಾಣದೆ 'ಯಾರು?' ಎಂದೆ. 'ನೋಡಿ, ನಿಮ್ಮ ಮಾವ-ಜರದ ಮಲಿನ ಯಜಮಾನ' (ನನ್ನ ಕತೆಯಲ್ಲಿಯ ಒಂದು ಪಾತ್ರ. ಧಾರವಾಡದಲ್ಲಿ ಆ ಕತೆಯನ್ನು ಓದಿ ತೋರಿಸಿದ್ದೆ) ಎಂದರು. ನಾವೆಲ್ಲ ಗೊಳ್ಳೆಂದು ನಕ್ಕೆವು. ಸಿಳ್ಳು ಹಾಕಿ ಗಾಡಿ ಹೊರಟಿತು. ಕಿಡಕಿಯಲ್ಲಿ ಮುಖ ಹಾಕಿ ಅವರು ನೋಡುತ್ತಿದ್ದರು. ನಾನು ಹಾಗೆಯೆ ಕಲ್ಗೊಂಬೆಯಂತೆ ನೋಡುತ್ತ ನಿಂತಿದ್ದೆ. ಗಾಡಿ ಹೊರಟು ಹೋಗಿದೆ; ಆದರೆ ಕಿಡಕಿಯಲ್ಲಿ ನಗುತ್ತ ಕುಳಿತ ಗೌರಮ್ಮ ಇನ್ನೂ ಕಾಣತ್ತಿದ್ದಾರೆ

ಅವರ 'ಪತ್ರ ಕತೆ' ಗಳನ್ನೋದಿ ಸಂತೋಷ ಪಟ್ಟ ನನಗೆ ಅವರಿಂದ ಬರುತ್ತಿದ್ದ ಕಾಗದಗಳು ಮತ್ತಿಷ್ಟು ಸಂತೋಷ ಕೊಟ್ಟಿವೆ. ಅವರ ಸುಂದರವಾದ-ಹಗುರಾದ ಮಾತುಗಳು, ಮಿತವರಿತ ವಿನೋದ, ಮೋಹಕವಾದ ಶೈಲಿ-ಹೃದಯವನ್ನರಳಿಸುವಂತಹವು. ಅವರೊಡನೆ ಪರಿಚಯವಾದಂದಿನಿಂದ ಕಳೆದ ಒಂದು ವರ್ಷದಲ್ಲಿ ನನಗೆ ಅವರ ಪತ್ರಲಾಭ ಅನಂತವಾಗಿ ದೊರೆತಿದೆ.

ನನ್ನದೊಂದು ಕತೆಯನ್ನು ಅವರ ಅವಲೋಕನೆಗೆಂದು ಕಳಿಸಿದಾಗ ಕೂಡಲೆ ಅವರ ಕಾಗದ ಬಂತು. ಹೀಗೆ ಬರೆದಿದ್ದರು: *

'ನಿಮ್ಮ ಕಾಗದ ಬಂದಾಗ ನಾನು ಟೆನ್ನೀಸು ಆಡುತ್ತಿದ್ದೆ. ಟಪ್ಪಾಲಿನವನು ಕಾಗದ ಕೊಟ್ಟೊಡನೆಯೆ ನೋಡಿದೆ-ಯಾರದೆಂದು ; ನಿಮ್ಮದು! ಇಷ್ಟರವರೆಗೆ ಗೆಲ್ಲುತ್ತ ಬಂದವಳು ನಿಮ್ಮ ಕಾಗದ ಓದುವ ಆತುರತೆಯಲ್ಲಿ ಸೋತೇ ಹೋದೆ. ನನಗೆ


* ಇಲ್ಲಿ ಬರೆದ ಪತ್ರದ ಮಾತುಗಳನ್ನು ನನಗೆ ಅವರು ಬರೆದ ಪತ್ರಗಳಿಂದಲೇ ಎತ್ತಿ ಕೊಂಡಿದ್ದೇನೆ.

-ಲೇಖಕ