ಪುಟ:ಕಂಬನಿ-ಗೌರಮ್ಮ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

ತಿಳಿಯಲಾರದು. ನನಗೆ-ನನಗೆ ಅವ್ವ, ನಾನು ಬೇಬಿ ( ಗೌರಮ್ಮ ನಗರ ಆರು ವರ್ಷದ ಮಗು, ವಸಂತ ) ಗಿಂತ ಚಿಕ್ಕವಳಾಗಿರುವಾಗಿನಿಂದಲೂ ಇಲ್ಲ. ಹಾಗವಳು ಇಲ್ಲವೆಂದು ತಿಳಿದುಕೊಳ್ಳುವ ಶಕ್ತಿ, ನನಗೆ ಬರುವ ಮೊದಲೇ ನನಗವಳು ಇಲ್ಲವಾಗಿ ಬಿಟ್ಟಿದ್ದಳು. ಮತ್ತೆ 'ನನಗೂ ಎಲ್ಲರಂತೆ ಅವ್ವನಿಲ್ಲ' ಎಂದು ತಿಳಿದುಕೊಳ್ಳುನಂತಾಗುವಾಗ 'ಇಲ್ಲದಿದ್ದರೂ ತೊಂದರೆ ಇಲ್ಲ' ಎನ್ನುವಂತೆ ಅಭ್ಯಾಸವಾಗಿ ಹೋಗಿತ್ತು. ಆದರೂ-ಆದರೂ ನೋಡಿ, ಎಲ್ಲ ಹುಡುಗಿಯರು 'ನಮ್ಮವ್ವ-ನಮ್ಮವ್ವ ಹಾಗಿದ್ದಾರೆ-ಹೀಗಿದ್ದಾರೆ' ಎಂದಂದುಕೊಳ್ಳುವಾಗ 'ನನಗೂ ಅವ್ವ ಏಕಿರಬಾರದಿತ್ತು!' ಎನಿಸದಿರುವದಿಲ್ಲ. ಈಗೆರಡು ಮರು ತಿಂಗಳಾಯಿತು; ನಾನು ಮಡಿಕೇರಿಗೆ ಹೋಗಿದ್ದಾಗ ನನ್ನಣ್ಣ-ನನಗಿಂತಲೂ ಏಳೆಂಟು ವರ್ಷಗಳಿಗೆ ಹಿರಿಯನ-ಅವನಿಗೆ ನಮ್ಮ ಅವ್ವನ ನೆನಪು ಚೆನ್ನಾಗಿದೆ-ಆಗ ಏಕೋ ಮಾತಿಗೆ ನೋಡಿ, ಬೇಬಿ ತಂಟೆ ಮಾಡುತ್ತಿದ್ದ. ನಾನು ಅವನನ್ನು ಗದರಿಸಿದೆ. ಅದಕ್ಕೆ ಅಣ್ಣ ನೀನು ನೋಡು ಗೌರಿ, ನೀನು ಚಿಕ್ಕವಳಾಗಿರುವಾಗ ಇವನಿಗಿಂತಲೂ ಹೆಚ್ಚು ತಂಟೆನಾಡಿ ಅಮ್ಮನನ್ನು ಗೋಳಾಡಿಸುತ್ತಿದ್ದೆ. ಈಗ ಮಾತ್ರ ಅವನನ್ನು ಗದರಿಸುತ್ತೀ. ನಿನ್ನಷ್ಟೇ ತುಂಟತನ ಇವನಿಗಿದ್ದಿದ್ದರೆ ನೀನೇನು ಮಾಡುತ್ತಿದ್ದೆಯೋ; ಅಮ್ಮ ಇರಬೇಕಿತ್ತು ಈಗ' ಎಂದ. ಅಣ್ಣ ನನ್ನನ್ನು ತಮಾಷೆ ಮಾಡುವ ಸಲುವಾಗಿ ಆಡಿದ ಮಾತುಗಳಿವು; ಆದರೂ 'ಅಮ್ಮ ಇರಬೇಕಿತ್ತು ಈಗ' ಎಂದು ಅವನೆನ್ನುವಾಗ 'ಅಮ್ಮನಿಲ್ಲವಲ್ಲಾ' ಎಂದೂ- 'ಅಮ್ಮ ಇದ್ದಿದ್ದರೆ ನಾನು ಈಗ ಬೇಬಿಯನ್ನು ಪ್ರೀತಿಸುವಷ್ಟೇ ಅವಳೂ ನನ್ನನ್ನು ಪ್ರೀತಿಸುತ್ತಿದ್ದಳಲ್ಲಾ' ಎಂದೂ–ನೋಡಿ, ಏನೇನೋ ಹುಚ್ಚು ಯೋಚನೆಗಳು ತಲೆತುಂಬ ತುಂಬಿದವು. ನಿಮಗಿದನ್ನೆಲ್ಲಾ ನಾನೇಕೆ ಬರೆಯುತ್ತೇನೆಂಬುದು ನನಗೇ ತಿಳಿಯದು. 'ಅವ್ವ ಮಗಳ ಮನೆಗೆ ಹೋಗಲು ಹಟ ಹಿಡಿದಳು' ಎಂದು ಬರೆದಿದ್ದೀರಿ. ಅದನ್ನೋದುವಾಗ ಏಕೋ ಇದೆಲ್ಲಾ ಬಂದು ಹೋಯಿತು. ಅಂತೂ ಅವರು