ಪುಟ:ಕಂಬನಿ-ಗೌರಮ್ಮ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಕಂಬನಿ

ಇವರ ತಂದೆಗೆ ಇವರ ಬರೆಹಗಳ ಮೇಲೆ ತುಂಬ ಪ್ರೀತಿ ಇತ್ತು. ಮೊನ್ನೆ ಮೊನ್ನೆ ಅವರು ತೀರಿದಾಗ ಗೌರಮ್ಮನವರು ವ್ಯಸನಪಟ್ಟು ಹೀಗೆ ಬರೆದರು:

"ನಿಮ್ಮ ಕಾಗದ, ಅದರೊಡನೆಯೇ ಇನ್ನೊಂದು ಟೆಲಿಗ್ರಾಮ್. ನಿಮ್ಮ ಕಾಗದ ಒಡೆಯುವ ಮೊದಲೇ ಅದನ್ನೊಡೆದು ಓದಿದೆ. ನನ್ನ ತಂದೆ-ತಾಯಿಯಿಲ್ಲದೆ ನನ್ನನ್ನು ತಾಯಿ ತಂದೆಗಳ ಭಾರವನ್ನು ಹೊತ್ತು, ಸಾಕಿದ ನನ್ನ ತಂದೆ-ಇನ್ನಿಲ್ಲವೆಂದು ಓದಿದೆ. ಅವರನ್ನು ನೋಡದೆ ಎರಡು ತಿಂಗಳಾಗಿತ್ತು. ಏನೋ ಒಂದು ದಿನ ಸ್ವಲ್ಪ ಜ್ವರವಿತ್ತಂತೆ. ಅಷ್ಟರ ಸಲುವಾಗಿ ಕಾಗದವೇಕೆ ? ಎಂದು ನನಗೆ ಬರೆದಿರಲಿಲ್ಲ. ಮರುದಿನ ಸ್ನಾನ ಮಾಡಿ ಆಯಾಸವೆಂದು ಮಲಗಿದರಂತೆ. ಹತ್ತೇ ನಿಮಿಷಗಳೊಳಗಾಗಿ ಆಯಾಸ-ನರಳವಿಕೆ ಇಲ್ಲದೆಡೆಗೆ ಹೋಗಿ ಬಿಟ್ಟರವರು. ಆ ದಿನದಿಂದ ಈಚೆಗಿನ ಕಾಲವೆಲ್ಲ ನನ್ನ ಜೀವನದ ಅತ್ಯಂತ ದುಃಖದ ದಿನಗಳಾಗಿವೆ. ನೀವು ಪ್ರಸಿದ್ಧಿಸುವ ನನ್ನ ಪುಸ್ತಕ ನೋಡಲಿಲ್ಲ ಅವರು”

ಈ ಸಂಗ್ರಹಕ್ಕೆ ಮೊದಲು 'ಚಿಗುರು' ಎಂದು ಹೆಸರಿಟ್ಟಿತ್ತು. ಮೊನ್ನೆ ಮೊನ್ನೆ ಗೌರಮ್ಮನವರು ಅದನ್ನು 'ಕಂಬನಿ' ಎಂದು ಮಾರ್ಪಡಿಸಿ ತಾವೂ ಪುಸ್ತಕ ನೋಡದೆ, ಕನ್ನಡಿಗರೆಲ್ಲ ಕಂಬನಿಗರೆಯುವಂತೆ ಮಾಡಿ ನಮ್ಮನ್ನಗಲಿ ಹೋದರು.

ಇವರ ಕತೆಗಳಿಂದ ಚಿಗುರಿದ ಹೆಣ್ಣುಮಕ್ಕಳ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಮಂಗಲಪ್ರದವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಇವರ ಮರಣದಿಂದ ಕನ್ನಡ ನಾಡೇ ಮರುಗುವಂತಾಯಿತು. ಗೌರಮ್ಮನವರ ಆರು ವರ್ಷದ ಎಳೆಯ ಮಗು ವಸಂತ( ಬೇಬಿ) ಚಿಗುರುವ ತನ್ನ ಆಯುಷ್ಯದಲ್ಲಿ, ಇಂತಹ ಎಳೆಯತನದಲ್ಲಿ ತನ್ನ ತಾಯಿಯಂತೆ-ಪರದೇಶಿ ತನವನ್ನು ಭೋಗಿಸಬೇಕಾಗಿ ಬಂತು. ಇವರ ಪತಿಗೆ ಒಮ್ಮೆಲೆ ಘಟಿಸಿದ ಸಹಿಸಲಾರದ ಈ ಒಂಟೆಗತನದ ದುಃಖದಲ್ಲಿ....!