ಪುಟ:ಕಂಬನಿ-ಗೌರಮ್ಮ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಣಿಯ ಸಮಸ್ಯೆ

ಇಂದು ಆ ದಿನ ಬೆಳಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯು ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತ ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುಗೆ ಬೇಸರವಾಯ್ತು. 'ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ್ತು' ಎನ್ನುವ ಸ್ವಭಾವ ಇಂದು ಜನರಲ್ಲವಾದರೂ ಆ ಮನೆಗೆ ಒಕ್ಕಲ ಬಂದುದರಿಂದ ಅವಳಿಗೆ ಸಂತೋಷಕ್ಕಿಂತ ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು.

ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ತಾಯನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು. ಇಷ್ಟೇ ಸಾಲದು ಎಂದೇನೋ-ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು. ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟಿದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೋ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು.

1