ಪುಟ:ಕಂಬನಿ-ಗೌರಮ್ಮ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಮನೆ ಎಂದರೆ ಅವಳಿಗೆ ಬಲು ಪ್ರೀತಿ. ಅದನ್ನು ಸುಂದರವಾಗಿಟ್ಟುಕೊಳ್ಳುವುದೊಂದೇ ಅವಳ ಜೀವನದ ಗುರಿ. ತಾನು, ತನ್ನದು ಎಂಬುದಕ್ಕೆ ಎಡೆಯಿಲ್ಲದೆ ಬೆಳೆದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯವಲ್ಲ. ಮತ್ತೆ ಅವಳ ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಅದೂ ಆ ಮನೆಯಲ್ಲಿಯೇ. ಅವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗಂಡ ಸತ್ತು ಹೋಗಿದ್ದ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತಮೇಲೆ. ಹಾಗೆ ನೋಡುವುದಾದರೆ ಅವನು ಸತ್ತಮೇಲೆಯೇ ಅವಳ ಜೀವಸ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ ಹೆಚ್ಚಾಯಿತು. ಆದರೆ ಇಂದು ಬುದ್ಧಿ ಒಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ವತಂತ್ರವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು 'ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ' ಎಂದು ಎಷ್ಟೋ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ.

ಇದು ಆರು ವರ್ಷಗಳ ಹಿಂದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನೆರೆ ಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲಿ ಹೋಗಿ ಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಆವಶ್ಯಕತೆ ಅವಳಿಗೆ ತೋರಿಬರಲಿಲ್ಲ.

ಅವಳದು ಏಕಾಂತವನ್ನು ಬಯಸುವ ಜೀವ. ಹುಟ್ಟಿದಂದಿನಿಂದ ತನ್ನವರು, ತನ್ನದು ಎಂಬುದಿಲ್ಲದೆ ಒಂಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ