ಪುಟ:ಕಂಬನಿ-ಗೌರಮ್ಮ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕಾರ...ರತ್ನನ ಬಟ್ಟೆಬರೆಗಳೂ ಹಾಗೆಯೇ-ಅವನಿಗೆ ಬೇಕಾದಷ್ಟು ಬಟ್ಟೆಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು.

ಮದುವೆಯಾದ ಹೊಸತರಲ್ಲಿ, ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ 'ನನ್ನ ವಾಣಿಯು ಹೀಗೇಕೆ?' ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದ್ದ. ಇನ್ನು ಮುಂದೆ ಹೀಗೆ ಮಾಡಬೇಡವೆಂದು ಹೇಳಿ ಸ್ವಲ್ಪ ಕೋಪಿಸಿ ವಾಣಿಗೆ ಬುದ್ಧಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳಿಗೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದುವು.

ದಿನಕಳೆದಂತೆ-ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದಮೊದಲು ಇಂದು ವಾಣಿಯನ್ನು ಸಮಾಧಾನಪಡಿಸುತ್ತಿದ್ದಳು. ಆದರೆ ಯಾವಾಗಲೂ ಅವಳ ಪ್ರಕೃತಿಯೇ ಹೀಗೆಂದು ತಿಳಿದ ಮೇಲೆ ಮಾತ್ರ ಇಂದುಗೆ 'ರತ್ನ ನಂಥ ಗಂಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟಿರಲಾರಳಲ್ಲ ಈ ವಾಣಿ !' ಎಂದು ಆಶ್ಚರ್ಯ. 'ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ' ಎಂದು ಒಂದು ನಿಟ್ಟುಸಿರು. ಮತ್ತೆ 'ಥೂ, ಹುಚ್ಚು ಯೋಚನೆ' ಎಂದೊಂದು ಮೋಡವುಜ್ಜಿದ ನಗು.

ಒಂದು ದಿನ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬಂದಳು. ಇಂದುವಿನ ಮನೆಗೆ