ಪುಟ:ಕಂಬನಿ-ಗೌರಮ್ಮ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಣಿಯ ದೀನ ಮುಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇಂದುಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ ? ವಾಣಿಗೂ ಅದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ತಾನು ಆ ರೀತಿ ಬಯಸುವುದು ಸ್ವಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳಳುತ್ತಾ 'ಎಂದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು' ಎಂದು ಹೇಳುವಾಗ ಇಂದುಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು, ಎಂದೂ ಆ ತರದ ಭಾವನೆಗಳಿಗೆ ಎಡೆಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೇ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತು. ಆ ಭಾವನೆಗಳಿಗೆ ಎಡೆಕೊಟ್ಟ ತಪ್ಪಿನ ಪ್ರಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು.

ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿಂತಿರುಗುವುದೂ ರತ್ನ ತನ್ನ ಮನೆಗೆ ಬರುವುದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾಣಿಯೊಡನೆ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡೆಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದುಕೊಂಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದೆ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನೆಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ. ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ದಪಡಿಸಿ ಕಾಯುತ್ತಿದ್ದಳು.

2