ಪುಟ:ಕಂಬನಿ-ಗೌರಮ್ಮ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ಚರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ. ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರೆಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ 'ನನ್ನ ವಾಣಿಯೂ ಹೀಗೆಯೇ ಕಾರ್ಯಕುಶಲೆಯಾಗಿದ್ದರೆ-' ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲ್ಪಿಸತೊಡಗಿದ. ಅವನನ್ನು ಮೆಚ್ಚಿಸಬೇಕೆಂದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿಸಿದಂತಿದ್ದುವು. ಅವನ ಅನನ್ಯಮನಸ್ಕತೆಯನ್ನು ಕಂಡು ವಾಣಿ 'ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು' ಎಂದು ಮನದಲ್ಲಿಯೇ ಹಲುಬಿದಳು. 'ಇನ್ನು ಮುಂದೆಂದೂ ಹೀಗಾಗಗೊಡುವುದಿಲ್ಲ' ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ಹಿಂದೆಷ್ಟೋ ಸಾರಿ ವಾಣಿ ಇದೇ ರೀತಿಯ ಪ್ರತಿಜ್ಞೆಗಳನ್ನು ಮಾಡಿಕೊಂಡಿದ್ದರೂ ಅವುಗಳೆಂದ ನೆರವೇರಲಿಲ್ಲ. ಆದರೆ ಈ ಸಾರಿ ದಿನ ಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿಂದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ವಾಣಿಯ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು.

ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿಂದ ಅವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮೆಚ್ಚಿಕೆಯ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಸಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತಿತ್ತು. ಅವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸಗಳನ್ನು ನೋಡಿ ಅವಳ ಚಿತ್ರವನ್ನು ಕಲ್ಪಿಸಿಕೊಂಡಿದ್ದನು.