ಪುಟ:ಕಂಬನಿ-ಗೌರಮ್ಮ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ರತ್ನನಿಗೆ ಇಂದುವನ್ನು ಪ್ರತ್ಯಕ್ಷ ಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ. ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಅವಳು ಕಾಣಸಿಕ್ಕುವಳೆಂದೂ ಅವನಿಗೆ ಗೊತ್ತು. ಅದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬಂದ. ತನ್ನೆಣಿಕೆಯಂತೆ ಇಂದು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ.

ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಒಂದು ಮೂಟೆ ಅವನ ಬಟ್ಟೆಗಳನ್ನು ಇಸ್ತ್ರಿಮಾಡಿ ಮಡಿಸಿಡುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು ಇಂದು. ವಾಣಿ ಅದೇ ಮೇಜಿನ ಒಂದು ಕೊನೆಯಲ್ಲಿ ಕಾಲುಗಳನ್ನಿಳಿಬಿಟ್ಟುಕೊಂಡು ಕುಳಿತು ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದಳು.

ಬಾಗಿಲ ಹತ್ತಿರವೇ ಐದಾರು ನಿಮಿಷಗಳೆಂದ ರತ್ನ ನಿಂತಿದ್ದರೂ ಇಬ್ಬರಿಗೂ ಆವನು ಬಂದುದು ತಿಳಿಯಲಿಲ್ಲ. ರತ್ನ ಮಾತಿನ ಮಳೆ ಸುರಿಸುತಿದ್ದ ತನ್ನ ಹೆಂಡತಿಯನ್ನೂ, ಕೆಲಸದಲ್ಲಿ ಮುಳುಗಿದ್ದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದೆ. ಅವರಿಬ್ಬರೊಳಗಿನ ಅಜಗಜಾಂತರ ವ್ಯತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಉಜ್ಜಿಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು, ಅವನ ಕಾಲ್ಪನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು ಆ ಕಮ್ಮಿಯನ್ನು ತುಂಬಿಕೊಟ್ಟಿತು. ಐದು, ಹತ್ತು, ಹದಿನೈದು ನಿಮಿಷಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ, ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ನನನ್ನು ನೋಡಿ- 'ಏನು ಇಷ್ಟೊಂದು ಬೇಗ ? ಸಿನಿಮಾಕ್ಕೋಗೋದಕ್ಕೋ..' ಎಂದು ಮೇಜಿನಿಂದ ಕೆಳಗಿಳಿದಳು. ಆಗಲೇ ಇಂದುವಿಗೂ ರತ್ನ ಬಂದುದರ