ಪುಟ:ಕಂಬನಿ-ಗೌರಮ್ಮ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾರಣ ಅವಳ ಅಸಾಧ್ಯವಾದ ತಲೆನೋವು. ಎಷ್ಟು ಅಕಸ್ಮಾತ್ತಾಗಿ ಇಂದುವಿನ ಅಳುವು ಸುರುವಾಗಿತ್ತೋ ಅಷ್ಟೇ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯ್ತು. ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿಬಿಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೊದಳು. ಮತ್ತೆ ತನಗೆ ಹೇಳದೆಯೇ ವಾಣಿ ರತ್ನನನ್ನು ಕರೆದುಕೊಂಡು ಬಂದಳಲ್ಲಾ ಎಂದು ಬೇರೆ. ರತ್ನನಿಗೂ ಹಾಗೆಯೇ. ಇಂದು-ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕ ಮಕ್ಕಳನ್ನು ಸಂತೈಸುವಂತೆ ಅವಳನ್ನೂ ಸಂತೈಸಿ ಸಮಾಧಾನ ಪಡಿಸಬೇಕೆಂದು ತೋರಿತು. ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ ಅಭ್ಯಾಸಬಲವೂ ಅವನನ್ನು ಬದುಕಿಸಿದುವು. ಮನದೊಳಗೆ ಯೋಚನೆಗಳದುದ್ದವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಲೆ ಮುಟ್ಟಿ ನೋಡಿದ. ಮತ್ತೆ ವಾಣಿಯ ಕಡೆ ತಿರುಗಿ 'ಜ್ವರವೂ ಇದೆ' ಎಂದ. ಅದಕ್ಕೆ ವಾಣಿ ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ' ಎಂದು ಇಂದುವಿನ ನಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ. ಆದರೆ ಆ ದಿನ ರಾತ್ರಿ ವಾಣಿ 'ನೀವು ನೋಡಿದ ಚಿತ್ರ ಯಾವುದು ?' ಎಂದು ಕೇಳಿದ್ದರೆ ಅಳುತ್ತಿದ್ದ ಇಂದುವಿನ ಮುಖ' ಎಂದವನು ಹೇಳಬೇಕಾಗುತ್ತಿತ್ತು.

ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿಹೋಯ್ತು. ಹೀಗೆ ನೆರೆಮನೆಯ ಒಕ್ಕಲು ಬಂದು ಆರು ತಿಂಗಳು

೧೫