ಪುಟ:ಕಂಬನಿ-ಗೌರಮ್ಮ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೇಳಬೇಕೆಂದು ಆಸೆ; ಕೇಳಿದರೆ ರತ್ನನ ಹಾಸ್ಯಕ್ಕೆ ದಾರಿಮಾಡಿ ಕೊಟ್ಟಂತಾ ಗುತ್ತಿತ್ತು. ಕೊನೆಗೂ ಆಸೆಯೇ ಅಭಿಮಾನವನ್ನು ಗೆದ್ದುಬಿಟ್ಟಿತು.

'ನಿನ್ನ ತಂಗಿ ಹೇಗಿದ್ದಾಳಂತೋ?'

'ಇರೋ ಹಾಗೆ ಇದ್ದಾಳಂತೆ.'

'ರಾಜನಿಗೆ ಈ ಉತ್ತರದಿಂದ ತೃಪ್ತಿಯಾಗಲಿಲ್ಲ. 'ಕೊಡು ನೋಡೋಣ' ಎಂದ. 'ನನಗೆ ಬರ್ದ ಕಾಗ್ದ, ನಿನ್ಗ್ಯಾತಕ್ಕೆ ಕೊಡ್ಲಿ' ಎಂದ ರತ್ನ.

'ಕೊಡೋ ಸುಮ್ಮ-ತಮಾಷೆ ಮಾಡ್ಬೇಡ.'

'ದಮ್ಮಯ್ಯ ಅನ್ನು ಕೊಡ್ತೀನಿ.'

ರಾಜನ ಆಸೆಯನ್ನು ಅಭಿಮಾನವು ಸ್ವಲ್ಪ ಹೊತ್ತಿನವರೆಗೆ ತಡೆದರೂ ಪುನಃ ಆಸೆಯೇ ಜಯಶಾಲಿಯಾಯಿತು. 'ದಮ್ಮಯ್ಯ-ಕೊಡೀಗ' ಎಂದ. 'ದಮ್ಮಯ್ಯ ಅನ್ನಲಿಕ್ಕೆ ಈ ಕಾಗ್ದದ ಚೂರೊಳ್ಗೆ ಏನಿದ್ಯೋ ದೇವ್ರೇ ಬಲ್ಲ' ಎಂದು ನಗುತ್ತಾ ರತ್ನ ಕಾಗದ ಕೊಟ್ಟ. 'ನಿನ್ಗೂ ಬರದೆ ಇರೋಲ್ಲ ಕಾಲ, ಆಗಾಗ್ಲಿ ಮಾಡ್ತೀನ್ನೋಡು' ಎಂದುಕೊಂಡು ಕಾಗದ ಓದುತ್ತಾ ಅಲ್ಲಿದ್ದ ಒಂದು ಬೆಂಚಿನ ಮೇಲೆ ರಾಜ ಕುಳಿತುಕೊಂಡ. ರತ್ನ ತನ್ನ ಕಡೆ ಬರುತ್ತಿದ್ದ ಒಬ್ಬ ಸ್ನೇಹಿತನ ಹತ್ತಿರಹೋಗಿ ಹರಟೆಗಾರಂಭಿಸಿದೆ. ಆ ಮಾತು ಈ ಮಾತು ಆಡಿ ಕೊನೆಗೆ ಆ ಸ್ನೇಹಿತ 'ಮೈಸೂರು ಸೀಮೆಂದ ಕುಮಾರಿ ವಾಣಿ ಎಂಬೋಳು ಬಂದಿದ್ದಾಳೆ-ಅವಳ ಸಂಗೀತವಿದೆಯಂತೆ. ಬಾರೋ ಹೋಗೋಣ' ಎಂದ. ರತ್ನನಿಗೆ ಸಂಗೀತವೆಂದರೆ ಜೀವ. 'ರಾಜ, ಬರ್ತೀಯೇನೋ' ಎಂದು ಕೇಳಿದ. ಸೀತೆಯ ಕಾಗದ ನೂರು ಬಾರಿಯಾದರೂ ಓದದಿದ್ದರೆ ರಾಜನಿಗೆ ತೃಪ್ತಿಯಿಲ್ಲ, ಅವನು 'ನಾ ಬರೋಲ್ಲ. ನೀ ಹೋಗು' ಎಂದ. ಸ್ನೇಹಿತನೊಡನೆ ರತ್ನ ಕುಮಾರಿ ವಾಣಿಯ ಸಂಗೀತಕ್ಕೆ ಹೋದ. ಸೀತೆಯ ಕಾಗದ ಕಂಠಪಾಠಮಾಡುತ್ತಾ ರಾಜ ಬೆಂಚಿನ ಮೇಲೆಯೇ ಕೂತಿದ್ದ.

೨೫

4