ಪುಟ:ಕಂಬನಿ-ಗೌರಮ್ಮ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜ ಮರುದಿನ ಸಾಯಂಕಾಲ ಕಾಲೇಜಿನಿಂದ ಬಂದೊಡನೆಯೇ ಬಟ್ಟೆಯನ್ನು ತೆಗೆದಿಟ್ಟು ಒಂದು ನಾವೆಲ್ ಹಿಡಿದುಕೊಂಡು ಕುರ್ಚಿಯ ಮೇಲೆ ಕುಳಿತುಬಿಟ್ಟ. ರತ್ನ ಹೊಸ ಸೂಟ್ ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ತಲೆಬಾಚಿಕೊಳ್ಳುತ್ತಾ 'ರಾಜ ತಿರುಗಾಡೋಕ್ಕೆ ಬರೋದಿಲ್ವೇನೋ' ಎಂದು ಕೇಳಿದ 'ಈ ನಾವೆಲ್ ಮುಗೀದೆ ನಾನೇಳೋಲ್ಲ ಇಲ್ಲಿಂದ-ನೀ ಬೇಕಾದ್ರೆ ಹೋಗು' ಎಂದ ರಾಜ. ರತ್ನನೂ ಹೆಚ್ಚಿಗೆ ಒತ್ತಾಯ ಮಾಡಲಿಲ್ಲ. ಮತ್ತೊಂದು ಸಾರಿ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಹೊರಗೆ ಹೋದ. ಆ ದಿನ ರತ್ನ ಹಿಂತಿರುಗಿ ಬರುವಾಗ ಒಂಬತ್ತು ಗಂಟೆ ಹೊಡೆದು ಹೋಗಿತ್ತು. ರಾಜನ ನಾವೆಲ್ ಮುಗಿದಿರಲಿಲ್ಲ-ಹಾಗಾಗಿ ಅವನಿಗೂ ಹೊತ್ತು ಹೋದುದೇ ತಿಳಿದಿರಲಿಲ್ಲ. ಆದರೆ ಮರುದಿನವೂ ರತ್ನ ತಿರುಗಾಡಲು ಹೋಗಿ ಬರುವಾಗ ಹತ್ತುಗಂಟೆಯಾಗಿತ್ತು. ರಾಜ ಆ ದಿನ ಊರಿಗೆ ಕಾಗದ ಬರೆಯಲಿಕ್ಕಿದ್ದುದರಿಂದ ರತ್ನನೊಡನೆ ಹೋಗಿರಲಿಲ್ಲ. ರಾತ್ರಿಯ ಊಟದ ಸಮಯವಾದರೂ 'ರತ್ನ ಬರಲಿ, ಜೊತೆಯಲ್ಲಿ ಊಟ ಮಾಡಿದರಾಯಿತು' ಎಂದು ಊಟಮಾಡದೆ ಕೂತಿದ್ದ. ಬಹಳ ಹೊತ್ತಾದರೂ ರತ್ನ ಬರಲಿಲ್ಲ. ಕಾದು ಕಾದು ಸಾಕಾಗಿ ಹೋಯಿತು ರಾಜನಿಗೆ. ರತ್ನ ಬಂದೊಡನೆಯೇ-

'ಎಲ್ಗೋಗಿದ್ಯೋ ಇಷ್ಟೊತ್ತು? ಕಾದು ಕಾದು ಸಾಕಾಯ್ತು'

'ನಾರಾಯಣನ ಹತ್ರ ಮಾತಾಡ್ತಾ ವೇಳೆ ಆದ್ದೇ ತಿಳಿಲಿಲ್ಲ ಕಣೋ'

'ನಡಿ, ಇನ್ನಾದ್ರೂ ಹೋಗೋಣ ಊಟಕ್ಕೆ-ಏನ್ಮಾತಾಡ್ತಿದ್ರೋ ಇಷ್ಟೊತ್ತು?'

'ಏನೋ ಕಾಡುಹರಟೆ-ಹೋಗೋಣ ಊಟಕ್ಕೆ.'

ಊಟಮಾಡಿಕೊಂಡು ಬಂದ ಮೇಲೆ ರತ್ನ – ಲೋ, ನಾಳೆ ವಾಣಿ ಸಂಗೀತ ಇದೆ ಮಧ್ಯಾಹ್ನ ಮೂರು ಗಂಟೆಗೆ-ಬರ್ತೀಯೇನೋ?'

'ಕಾಲೇಜು!'

೨೭