ಪುಟ:ಕಂಬನಿ-ಗೌರಮ್ಮ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಳು ಹದಿನೇಳು ವರುಷದ ಹುಡುಗಿಯಾಗಿದ್ದಳಂತೆ. ನೋಡುವುದಕ್ಕೂ ಲಕ್ಷಣವಾಗಿದ್ದಿರಬಹುದೆಂದು ಈಗವಳನ್ನು ನೋಡುವಾಗ ತೋರುತ್ತೆ. ಅವಳನ್ನು ಕರೆದುಕೊಂಡು ಹೋದಾತನೀಗ ಅವಳನ್ನು ಬಿಟ್ಟು ಹೊರಟು ಹೋದನಂತೆ. ಅತ್ತಿಗೆ ಅವಳನ್ನು ನೋಡಿ ಏನೆಂದಳು ಗೊತ್ತೆ? 'ಸರಿಯಾದ ಶಿಕ್ಷೆ' ಎಂದು. ಆಗಿನಿಂದ ನನ್ನ ಮನಸ್ಸು ಹೇಳತ್ತಿದೆ: ಶಿಕ್ಷೆಗೆ ತಯಾರಾಗದು.

ರಘು, ಅವಳನ್ನು ಕೆಡಿಸಿದವನಿಗೆ ಶಿಕ್ಷೆಯೇ ಇಲ್ಲವೆ? ಇರಲಾರದು; ಏಕೆಂದರೆ ಅವನು ಗಂಡಸು, ಅಪರಾಧವ ಹೆಂಗಸರದೇ. ಅವಳನ್ನು ಕೆಟ್ಟದಾರಿಯಲ್ಲಿ ಕರೆದುಕೊಂಡು ಹೋದಾತನೀಗ ಇನ್ನೊಬ್ಬಳನ್ನು ಅದೇ ಹಾದಿಯಲ್ಲಿ ಕರೆದೊಯ್ಯಲು ಯತ್ನಿಸುತ್ತಿರಬಹುದು. ಆದರೆ ಗಂಡಸಾದುದರಿಂದ ಅವನಿಗೆ ಶಿಕ್ಷೆಯಿಲ್ಲ. ಆಚಾರದ ಅಧಿಕಾರ ಅಬಲೆಯರ ಮೇಲೆಯೇ.

ರಘು, ಹೀಗೆಲ್ಲಾ ಬರೆದೆನೆಂದು ಕೋಪಿಸಿಕೊಳ್ಳಬೇಡ. ಅವಳನ್ನು ನೆನೆದುಕೊಂಡರೆ ಮನಸ್ಸಿನಲ್ಲಿ ಏನೇನೋ ಆಗುತ್ತೆ.

ನೀನು ಮಾತ್ರ ನನ್ನನ್ನು ಅವಳ ಸ್ಥಿತಿಗೆ ಗುರಿಮಾಡಬೇಡವೆಂದು ಬೇಡಿಕೊಳ್ಳುತ್ತೇನೆ. ಆನಂತೆ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೂ ನಿನ್ನ ಹೃದಯದ ಒಂದು ಮೂಲೆಯಲ್ಲಾದರೂ ಒಂದಿಷ್ಟು ಸ್ಥಳ ಕೊಡು. ನಿರಾಕರಿಸಬೇಡ-

ನಿನ್ನ
ಶಾಂತಾ

೧೦-೪-೨೪

ಶಾಂತೆ,

ನಿನ್ನ ಕಾಗದ ಸಿಕ್ಕಿತು. ಓದಿ ಆಶ್ಚರ್ಯವಾಯಿತು. ನಾನೇ ನಿನ್ನನ್ನು ಕೊಚ್ಚೆಗೆ ನೂಕಿದೆ ಎಂದು ಬರೆದಿರುವೆ. ನೀನು ಹೇಳಲು ಆತುರದಿಂದಿದ್ದುದರಿಂದಲ್ಲವೇ ನಾನು ನೂಕಿದ್ದು ? ಅಂತಹ ಸಾಧ್ವಿಯಾಗಿದ್ದರೆ

೩೩

5