ಪುಟ:ಕಂಬನಿ-ಗೌರಮ್ಮ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಹಿಂದೆಯೇ ನಿನಗೆ ಬುದ್ಧಿಯಿರಬೇಕಿತ್ತು. ಈಗ ನನ್ನನ್ನು ದೂರಿ ಏನು ಪ್ರಯೋಜನ? 'All is fair in love and war.'

ನಿನ್ನನ್ನು ಇನ್ನಾರಾದರೂ ಮದುವೆಯಾಗುವವರಿದ್ದರೆ ಮದುವೆಯಾಗು. ನನ್ನಡ್ಡಿಯೇನೂ ಇಲ್ಲ.

ರಘು

೫-೫-೨೪

ರಾಜ,

ನನ್ನ ಹಿಂದಿನ ಕಾಗದಗಳೊಂದಕ್ಕೂ ಪ್ರತ್ಯುತ್ತರವೇ ಇಲ್ಲ. ಏಕೆ? ನೀನೇನಾದರೂ ತೊಂದರೆಯಲ್ಲಿರುವೆಯಾ?-ನಿನ್ನ ಚಿಂತೆ ಏನೆಂದು ನನಗೂ ಹೇಳಬಾರದೆ? ನನ್ನಿಂದೇನಾದರೂ ಆಗಬೇಕಾಗಿದ್ದರೆ ಸಂಕೋಚವಿಲ್ಲದೆ ಹೇಳು; ಕೈಲಾದಮಟ್ಟಿಗೆ ಸಹಾಯ ಮಾಡುತ್ತೇನೆ.

ಈ ಕಾಗದಕ್ಕಾದರೂ ಜವಾಬು ಬರಬಹುದೆಂದು ನಿರೀಕ್ಷಿಸುವ,-

ನಿನ್ನ,
ನಾನ

ನಾನ,

ನಿನ್ನ ಕಾಗದಗಳೆಲ್ಲವೂ ಸಿಕ್ಕಿದರೂ ಪ್ರತ್ಯುತ್ತರ ಬರೆಯದಿದ್ದುದಕ್ಕೆ ಕ್ಷಮಿಸು. ಹಲವು ಸಾರಿ ನಿನಗೆ ಬರೆಯಲು ಕುಳಿತೆ; ಎಷ್ಟೋ ಕಾಗದಗಳನ್ನು ಬರೆದೆ. ಆದರೆ ಒಂದನ್ನೂ ಟಪ್ಪಾಲಿಗೆ ಹಾಕಲು ಧೈರ್ಯ ಬರಲಿಲ್ಲ. ನಾನಂತೂ ಅತಿ ಕಷ್ಟದಲ್ಲಿದ್ದೇನೆ. ನಿನ್ನನ್ನೂ ನನ್ನ ಕಷ್ಟದಲ್ಲಿ ಭಾಗಿಯಾಗುವಂತೇಕೆ ಮಾಡಬೇಕು? ನನ್ನ ವಿಷಯದಲ್ಲಿ ನಿನಗೇನು ಮಾಡಲೂ ಸಾಧ್ಯವಿಲ್ಲ. ಸುಮ್ಮನೆ ನನ್ನ ಕಷ್ಟ ಹೇಳಿ ನಿನ್ನನ್ನು ವ್ಯಸನಕ್ಕೆ ಗುರಿಮಾಡಲೆ? ಬರೆಯಲಿಲ್ಲವೆಂದು ಕೋಪಿಸಬೇಡ; ಕ್ಷಮಿಸು.

ನನ್ನಿ,
ರಾಜ