ಪುಟ:ಕಂಬನಿ-ಗೌರಮ್ಮ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨-೫-೨೪

ರಾಜ,

ನನ್ನೊಡನೆಯ ಸಂಕೋಚವೇ? ನಿನ್ನ ಸುಖದಲ್ಲಿ ನಾನು ಪಾಲುಗಾರನಾಗುತ್ತಿದ್ದೆ. ನಿನ್ನ ವ್ಯಸನದ ದಿನಗಳಲ್ಲಿ ನನ್ನನ್ನೇಕೆ ವಂಚಿಸುತ್ತಿರುವೆ? ನಿನ್ನ ಸ್ನೇಹವೆಲ್ಲಾ ಏನಾಯ್ತು? ಏನಿದ್ದರೂ ನನ್ನೊಡನೆ ಹೇಳುತ್ತಿದ್ದ ನೀನು ಈಗೇನನ್ನು ಬಚ್ಚಿಡಲು ಪ್ರಯತ್ನಿಸುತ್ತಿರುವೆ? ನಿನ್ನ ವಿಷಯದಲ್ಲಿ ನನ್ನಿಂದೇನೂ ಮಾಡಲು ಸಾಧ್ಯವಿಲ್ಲದಿದ್ದರೂ ನಿನ್ನ ಕಷ್ಟದಲ್ಲಾದರೂ ಭಾಗಿಯಾಗುತ್ತೇನೆ. ನೀನು ನಿಜವಾಗಿಯೂ ನನ್ನನ್ನು ಸ್ನೇಹಿತ ಎಂದೆಣಿಸುತ್ತಿದ್ದರೆ ನಿನ್ನ ಕಷ್ಟಕ್ಕೆ ಕಾರಣವನ್ನು ಬರಿ. ನಿನ್ನ ಸುಖದಲ್ಲಿ ಪಾಲುಗಾರನಾಗಿದ್ದಂತೆಯೇ ಕಷ್ಟ ಕಾಲದಲ್ಲೂ ಇರುವೆನೆಂಬುದನ್ನು ನೆನಪಿನಲ್ಲಿಡು-

ಯಾವಾಗಲೂ ನಿನ್ನ,
ನಾನ

ನಾನ,

ನಿನ್ನೊಡನೆ ಹೇಳಬಾರದ ವಿಷಯಗಳೇನೂ ಇಲ್ಲ. ನಾನು ಹೇಳದಿದ್ದರೂ ತಾನಾಗಿಯೇ ತಿಳಿಯುವ ವಿಷಯವದು. ಬಚ್ಚಿಟ್ಟು ಉಪಯೋಗವೇನು ?

ನನ್ನ ತಂಗಿ ಶಾಂತೆಯನ್ನು ನೀನು ನೋಡಿರುವಿಯಷ್ಟೆ. ನೀನು ನೋಡಿದಾಗ ಅವಳು ಹತ್ತು ವರುಷದ ಹುಡುಗಿ. ಆಗಲೇ ಅವಳು ವಿಧವೆಯಾಗಿದ್ದಳು; ನಿನಗದು ಗೊತ್ತಿದೆ. ಅಮ್ಮ ಸಾಯುವಾಗ 'ರಾಜ, ಶಾಂತೆ ಏನೂ ತಿಳಿಯದ ಮಗು; ಅವಳನ್ನು ಪ್ರೀತಿಯಿಂದ ಕಾಪಾಡು' ಎಂದಿದ್ದಳು. ನಾನ, ಅಮ್ಮನ ಕಡೆಯ ಮಾತನ್ನು ನಾನು ನೆರವೇರಿಸಲಿಲ್ಲ. ನನ್ನ ಪಾಪಿಜನ್ಮಕ್ಕೆ ಧಿಕ್ಕಾರ!

೩೫