ಪುಟ:ಕಂಬನಿ-ಗೌರಮ್ಮ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅವಳ ಭಾಗ್ಯ

ದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಣ್ಣ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪ್ಪಿದ್ದೇ-ತಡ ಒಮ್ಮೆ ಕಿಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾಂ, ಹು-ಎನ್ನುವುದರೊಳಗೆ ಮದುವೆಯ ಆಗಿಹೋಯ್ತು. ನಾನೀಗ ಹೇಳಬೇಕೆಂದಿರುವುದು ಆ ಮದುವೆಯ ಸಮಯದ ಸಮಾಚಾರ.

ಕಿಟ್ಟಣ್ಣನೂ ಅವನ ಹೆಂಡತಿಯ ಆರತಿ ಅಕ್ಷತೆಗೆ ಹಸೆಯ ಮೇಲೆ ಕೂತಿದ್ದರು. ಹಿಂದಿನ ದಿನದ ಮದುವೆಯ ಗಲಾಟೆಯಲ್ಲಿ ವಧೂವರರನ್ನು ಸರಿಯಾಗಿ ನೋಡಿ ಹಾಸ್ಯಮಾಡಲು ಯಾರಿಗೂ ಸಮಯವಾಗಲೀ ಸಾಹಸವಾಗಲೀ ಇರಲಿಲ್ಲ. ಆದರೆ ಮರುದಿನ ಅರಸಿನ-ಎಣ್ಣೆಗೆ ಕೂರಿಸಿದಾಗ ಹೆಂಗಸರಿಗೇ ತಾನೆ ಸರ್ವ ಸ್ವಾತಂತ್ರ್ಯ! ಅಂದು ಊರಿನ ಮುತ್ತೈದೆಯರೆಲ್ಲಾ ಹಾಜರಾಗಿದ್ದರು. ಎಂದೂ ಅಷ್ಟೊಂದು ಜನ ಹೆಂಗಸರ ನೋಟಕ್ಕೆ-ಅವರ ಹುಚ್ಚು ಹಾಸ್ಯಕ್ಕೆ ಗುರಿಯಾಗದಿದ್ದ ಕಿಟ್ಟಣ್ಣನಿಗೆ ಆಗ 'ಸಾಕಪ್ಪ' ಮದುವೆಯ ಸುಖ ಸಾಕು' ಎನಿಸಿರಬೇಕು. ನನ್ನನ್ನು ಕೂಗಿ 'ಹೇಗಾದರೂ ಈ Ordeal ಒಂದ್ಸಾರಿ ಮುಗಿಸೋದಕ್ಕೆ ಹೇಳು' ಎಂದೆ. ಆದರೆ ಆ ಸ್ತ್ರೀರಾಜ್ಯದಲ್ಲಿ ಅವನ ಮಾತಿಗೆ ಬೆಲೆ ದೊರೆಯಬೇಕು ?

'ಜಯ, ನೀ ಒಂದು ಹಾಡು ಹೇಳೆ ' ಎಂದು, 'ನನಗೆ ಬರೋಲ್ಲ' ಎಂದು ಬಿಂಕವಾಡುತ್ತಿದ್ದ ಜಯನನ್ನು ಬಲಾತ್ಕರಿಸಿ ಹಾಡಿಸಿದ್ದಾಯಿತು.