ಪುಟ:ಕಂಬನಿ-ಗೌರಮ್ಮ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ಹತ್ತಿರ ಹಾಡಿಸಬೇಕು. ಅವಳು ಬಂದರೆ ಇಲ್ಲಿಗೆ ಕರೆದುಕೊಂಡು ಬಾ' ಎಂದು ಅನೇಕ ಸಾರಿ ಹೇಳಿದ. ಆದರೆ ಹೇಳಿದೆನಲ್ಲ, ಗಡಿಬಿಡಿಯಲ್ಲಿ ಆಗಲೇ ಇಲ್ಲ. ಅಂತೂ ನಾವು ಹೊರಡುವ ತನಕವೂ ಪುನಃ ಅವಳಿಂದ ಹಾಡಿಸಲು ಏನೇನೋ ಕಾರಣಗಳಿಂದ ಆಗಲೇ ಇಲ್ಲ; ಹಾಗೆಯೇ ಹೊರಟುಬಿಟ್ಟೆವು.

ನಮ್ಮನ್ನು ಕಳುಹಿಸಲು ಬಂದಿದ್ದವರೊಡನೆ ಅವಳೂ ಬಸ್ಸಿನ ತನಕ ಬಂದಿದ್ದಳು. ಬಸ್ಸು ಹತ್ತುವಾಗ 'ಹೋಗಿ ಬರ್ತೇನೆ ಪಾರು; ನಿನ್ನ ಮದ್ವೆಗೆ ನಂಗೆ ಕಾಗ್ದಾ ಹಾಕ್ಸು' ಎಂದೆ. ಅಲ್ಲೇ ನಿಂತಿದ್ದ ಅವಳ ತಂದೆ ಹಾಕ್ದೇ ಇರ್ತೇವ್ಯೇ -ಆದರೆ ನೋಡ್ತಾಯಿ-ಲಗ್ನಕ್ಕೂ ದಿನ ಬರ್ಬೇ ಕಲ್ಲಾ' ಎಂದು ನಿಟ್ಟುಸಿರು ಬಿಟ್ಟರು.

****

ಎರಡು ವರ್ಷಗಳ ತರುವಾಯ ಕಿಟ್ಟಣ್ಣನ ಹೆಂಡತಿ-ಅತ್ತಿಗೆ ತೌರೂರಿಗೆ ಹೋಗಿದ್ದಾಗ ಪಾರುವಿನ ಮದುವೆಯಾಯಿತಂತೆ. ನನಗೂ ಕಾಗದ ಬಂದಿತ್ತು. ಏನೇನೋ ಸಂದರ್ಭಗಳಿಂದ ಹೋಗಲಾಗಲಿಲ್ಲ. ಅತ್ತಿಗೆ ಹಿಂತಿರುಗಿ ಬಂದ ಮೇಲೆ ಅವಳಿಂದ ಪಾರುವಿನ ಸುದ್ದಿ ಎಲ್ಲಾ ಕೇಳಿ ತಿಳಿದುಕೊಂಡೆ. ಆತ್ತಿಗೆಯ ಹೇಳಿಕೆ: ದರಿದ್ರ ಗುಮಾಸ್ತರ ಕುರೂಪಿ ಮಗಳಿಗೆ ಅವಳಯೋಗ್ಯತೆಯನ್ನು ಮೀರಿದ ವರನೇ ದೊರೆತನೆಂದು. ಆದರೆ ಅಷ್ಟರಿಂದ ನನಗೆ ತೃಪ್ತಿಯಿಲ್ಲ. ಬಿಡಿಸಿ ಕೇಳಿದೆ. ಅವಳು ಹೇಳಿದ ಮಾತುಗಳಿವು. 'ಹೌದು, ಅವಳಿಗೆ ಮದುವೆಯಾಯಿತು. ಆ ಕುರೂಪಿಗೆ ಯೋಗ್ಯನಾದ ವರನೆಲ್ಲಿ ದೊರೆಯಬೇಕು ಹೇಳು-ಅದೂ ವರದಕ್ಷಿಣೆ ಒಂದು ಕಾಸೂ ಇಲ್ಲದೆ. ಅದೇನೋ ಅವಳ ಪೂರ್ವಜನ್ಮದ ಸುಕೃತ. ಅದೇ ಸ್ವಲ್ಪ ಕ್ಷಯದವನಾದರೂ ಊಟಬಟ್ಟೆಗಳಿಗೆ ಕೊರತೆ ಇಲ್ಲದಷ್ಟು ಇರುವಾತ, ಎರಡು ಖರ್ಚನ್ನೂ ವಹಿಸಿಕೊಂಡು ಅವಳನ್ನು ಮದುವೆಯಾದ. ಗಂಡನ ಮನೆಯಲ್ಲಿ ಅತ್ತೆ ಮಾವ ಯಾರೂ ಇಲ್ಲ. ಗಂಡನನ್ನು ಸ್ವಲ್ಪ ಆರೈಕೆ ಮಾಡಿಕೊಂಡಿದ್ದರೆ ಸರಿ-ಉಂಡುಟ್ಟು ಸುಖವಾಗಿರಲು ಯಾವ ತೊಂದರೆಯ ಇಲ್ಲ. ನಿಜವಾಗಿಯೂ ಪಾರು ಭಾಗ್ಯಶಾಲಿನಿ'-