ಪುಟ:ಕಂಬನಿ-ಗೌರಮ್ಮ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೌಸಲ್ಯಾನಂದನ

ನೆಯಿಂದ ಅಣ್ಣ ಕಾಗದ ಬರೆದಿದ್ದರು: 'ಇಲ್ಲೆಲ್ಲ ಸಿಡುಬಿನ ಗಲಾಟೆ ಬಹಳ ಜೋರಾಗಿದೆ. ಈ ರಜೆಯಲ್ಲಿ ಮನೆಗೆ ಬರಬೇಡ, ಅಲ್ಲೇ ಇರು. ಕ್ರಿಸ್‌ಮಸ್‌ ರಜೆ ಸಿಕ್ಕಿದಾಗ ಬಂದು ಕರೆದುಕೊಂಡು ಬರುತ್ತೇನೆ.'

ಬಹಳ ದಿನಗಳಿಂದ ಬಯಸಿ ಹಂಬಲಿಸಿದ ರಜೆಗೆ ಒಂದೇ ವಾರ ಬಾಕಿ ಇತ್ತು. ಹುಡುಗಿಯರೆಲ್ಲಾ ಊರಿಗೆ ಹೊರಡುವ ಸನ್ನಾಹ ಮಾಡುತ್ತಿದ್ದರು. ನಾನಂತೂ ಎಲ್ಲರಿಗಿಂತ ಮೊದಲೇ ಪುಸ್ತಕಗಳನ್ನೂ ಬಟ್ಟೆಗಳನ್ನೂ ಕಟ್ಟಿ ಮುಗಿಸಿದ್ದೆ. ರಜಾ ದಿನಗಳನ್ನು ಹೇಗೆ ಕಳೆಯಬೇಕು, ಏನೇನು ಮಾಡಬೇಕು ಎಂದು ಯೋಚಿಸಿ ಸಂತೋಷ ಪಡುತ್ತಿದ್ದಾಗ ಈ ಕಾಗದ! ಅಮ್ಮ, ಅಣ್ಣ, ಚಿಕ್ಕ ಮೋಹನ ಎಲ್ಲರನ್ನೂ ನೋಡಬೇಕೆಂದಿದ್ದ ಆಕೆ ನಿರಾಶೆ. ಓದಿ ಬಹಳ ಬೇಸರವಾಯ್ತು. ಆಗ ರೂಮಿನಲ್ಲಿ ಯಾರೂ ಇಲ್ಲದುದರಿಂದ ಕಣ್ಣೀರಿಗೂ ತಡೆಯುಂಟಾಗಲಿಲ್ಲ. ಹಾಗೆಯೇ ಮಂಚದ ಮೇಲೆ ಬಿದ್ದುಕೊಂಡು, ಹುಡುಗಿಯರೆಲ್ಲ ಹೋದ ಮೇಲೆ 'ಹೇಗಪ್ಪಾ ದಿನಗಳನ್ನು ಕಳೆಯಲಿ' ಎಂದು ಚಿಂತಿಸತೊಡಗಿದೆ. ಅಷ್ಟರಲ್ಲಿ ಲಿನ್ನಿ ಬಂದಳು. ಅವಳ ಹೆಸರು ವಸಂತಿ. ಆದರೆ ಮೊದಲವಳು ಶಾಲೆಗೆ ಬಂದು ಸೇರಿದಾಗ ವಿನೋದ, ತೆಳ್ಳಗಿದ್ದ ಅವಳನ್ನು ನೋಡಿ 'ಲೀನಿ' ಎಂದು ತಮಾಷೆ ಮಾಡಿದ್ದಳು. ಅಂದಿನಿಂದ ಅವಳಿಗೆ ಲೀನಿ, ಲಿನ್ನಿ ಎಂಬ ಹೆಸರು ಸ್ಥಿರವಾಗಿಹೋಯ್ತು. 'ವಸಂತಿ ಎಂದರೆ ಯಾವ ವಸಂತಿ ? ' ಎಂದು