ಪುಟ:ಕಂಬನಿ-ಗೌರಮ್ಮ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಲ್ಲರೂ ಕೇಳುತ್ತಿದ್ದರು. ಕೊನೆಕೊನೆಗೆ ಉಪಾಧ್ಯಾಯಿನಿಯರಿಗೂ ಅದೇ ಪಾಠವಾಗಿ ವಸಂತಿ ಎಂಬ ಹೆಸರೇ ಮರೆತುಹೋಗಿತ್ತು.

ಲಿನ್ನಿ ಬಲು ಚುರುಕು ಹುಡುಗಿ. ಎಲ್ಲರೂ ಅವಳಿಗೆ ಸ್ನೇಹಿತರು. ಮನಸ್ಸು ಮಾಡಿದ್ದರವಳು ಕ್ಲಾಸಿನಲ್ಲಿ ಮೊದಲನೆಯವಳಾಗಬಹುದಿತ್ತು. ನಮಗಾರಿಗೂ ತಿಳಿಯದಿದ್ದ ಲೆಕ್ಕವನ್ನವಳು ಬಲು ಸುಲಭದಲ್ಲಿ ಮಾಡಿಬಿಡುತ್ತಿದ್ದಳು. ಆದರೆ ಅವಳಿಗೆ ಪಾಠಕ್ಕಿಂತ ಆಟದಲ್ಲಿ ತಂಟೆಯಲ್ಲಿ ಮನಸ್ಸು ಹೆಚ್ಚು. ಮಾಡಬೇಡವೆಂದುದನ್ನು ಮಾಡುವುದಕ್ಕೆ ಬಯಕೆ ಬಹಳ. ನಮ್ಮ ಶಾಲೆಯ ಕಂಪೌಂಡಿನಲ್ಲಿದ್ದ ದೊಡ್ಡ ದೊಡ್ಡ ಮರಗಳ ಮೇಲೆಲ್ಲಾ ಹತ್ತಿ ಅದಕ್ಕಾಗಿ ಎಷ್ಟೋ ಸಾರಿ ಶಿಕ್ಷೆಯನ್ನನುಭವಿಸಿದ್ದಳು. ನಮ್ಮ ಶಾಲೆಯಲ್ಲಿ ಅವಳನ್ನು ಟೆನ್ನಿಸ್ ಆಟದಲ್ಲೂ ಈಜುವುದರಲ್ಲೂ ಮೀರುವವರಿರಲಿಲ್ಲ. ನೋಡುವುದಕ್ಕೆ ಸುಂದರಿಯಲ್ಲದಿದ್ದರೂ ಅವಳ ಸ್ವರ ಬಹಳ ಇಂಪು. ಪ್ರಾರ್ಥನೆಯ ಸಮಯದಲ್ಲಿ ಅವಳು ಹಾಡುವುದನ್ನು ಕೇಳುವಾಗ ಪ್ರಪಂಚವೇ ಮರೆತು ಹೋಗುತ್ತಿತ್ತು. ಸಂಗೀತದ ಸಮಯ ( ಪೀರಿಯಡ್ ) ದಲ್ಲಂತೂ ಅವಳು ಹಾಡುವುದನ್ನು ಕೇಳುವದಕ್ಕಾಗಿ ಜ್ವರಬಂದ ಹುಡುಗಿಯರು ಸಹ ಹಾಜರಾಗುತ್ತಿದ್ದರು. ಅಷ್ಟು ಇಂಪು ಅವಳ ಸ್ವರ. ಲಿನ್ನಿ ಯಾವಾಗಲೂ ನಗುತ್ತಲೇ ಇರುವಳು. ಅವಳಿಗೆ ಸಿಟ್ಟು ಬಂದುದನ್ನಾಗಲಿ ಅವಳತ್ತುದನ್ನಾಗಲಿ ನಾವಾರೂ ನೋಡಿರಲಿಲ್ಲ. ಯಾವಾಗಲೂ ಏನಾದರೂ ತಂಟೆ (Mischief)ಯನ್ನು ಮಾಡುತ್ತಿರುವುದು ಅವಳ ಸ್ವಭಾವ. ಒಂದೇ ಒಂದು ನಿಮಿಷವಾದರೂ ಅವಳು ಸುಮ್ಮನೆ ಕೂರುವುದು ಅಪರೂಪ.

ಅವಳು ನನ್ನ ರೂಮ್ ಮೇಟ್ ( Room Mate ). ಒಳಗೆ ಬಂದು ನಾನು ಮಲಗಿದುದನ್ನು ನೋಡಿ 'ಏನು ಸೀತಾ, ಸೊಂಟ ಮುರಿದು ಹೋಗಿದೆಯೆ ? ಬಿದ್ದುಕೊಂಡಿರುವುದೇಕೆ ?' ಎಂದು ಕೇಳಿದಳು. ಅವಳ ಮಾತು ಕೇಳಿ ನಗು ಬಂತು. ಕಣ್ಣುಗಳನ್ನೊರಸಿಕೊಂಡು ಎದ್ದು ಕೂತೆ. ಅವಳೂ ಬಂದು ನನ್ನ ಹತ್ತಿರ ಕೂತು 'ಊರಿಂದ ಕಾಗದ ಬಂತೆ?' ಎಂದು

೪೭