ಪುಟ:ಕಂಬನಿ-ಗೌರಮ್ಮ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಕೇಳಿದಳು. ಮೇಜಿನಮೇಲಿದ್ದ ಅಣ್ಣನ ಕಾಗದವನ್ನು ತೆಗೆದು ಅವಳಿಗೆ ಕೊಟ್ಟೆ. ಓದಿ ನೋಡಿ 'ನಮ್ಮನೆಗೆ ಬಂದುಬಿಡು ಸೀತಾ, ಇನ್ನೊಂದು ಸಾರಿ ಬರುತ್ತೇನೆ, ಮತ್ತೊಂದು ಸಾರಿ ಬರುತ್ತೇನೆ ಎಂದು ಸುಳ್ಳು ನೆವನಗಳನ್ನು ಹೇಳುತ್ತಿದ್ದೆ. ಈ ರಜೆಯಲ್ಲಿ ಹೇಗಿದ್ದರೂ ಊರಿಗೆ ಹೋಗುವಂತಿಲ್ಲ, ಬಂದುಬಿಡು. ಇಲ್ಲವೆಂದರೆ ನಿನ್ನೊಡನಿನ್ನು ಮಾತಾಡುವುದಿಲ್ಲ' ಎಂದಳು. ಎಲ್ಲರೂ ಹೋದ ಮೇಲೆ ನಾನೊಬ್ಬಳೇ ಇರಬೇಕಲ್ಲಾ ಎಂದು ಬಹಳ ಬೇಸರವಾಗಿತ್ತು. ಲಿನ್ನಿಯೂ ಬಹಳ ದಿನಗಳಿಂದ ತನ್ನ ಮನೆಗೆ ಬರಬೇಕೆಂದು ಕರೆಯುತ್ತಿದ್ದಳು. ಒಬ್ಬಳೆ ಇರುವುದಕ್ಕಿಂತ ಲಿನ್ನಿಯೊಡನೆ ಹೋಗುವದೆ ಲೇಸೆಂದು 'ಆಗಲಿ' ಎಂದೆ. ಅವಳಿಗೆ ಬಹಳ ಸಂತೋಷವಾಯಿತು. ಎಲ್ಲ ಹುಡುಗಿಯರೂ ಅವಳಿಗೆ ಸ್ನೇಹಿತರಾಗಿದ್ದರೂ ನಾನೆಂದರೆ ಅವಳಿಗೆ ಹೆಚ್ಚಿನ ಪ್ರೀತಿ. ನನಗಿಂತಲೂ ಅವಳು ಒಂದು ವರ್ಷ ಹಿರಿಯಳು. ದೊಡ್ಡ ಹುಡುಗಿಯರು ನನ್ನನ್ನು ಕೀಟಲೆನಾಡುವಾಗ ನನ್ನ ಸಹಾಯಕ್ಕೆ ಯಾವಾಗಲೂ ಲಿನ್ನಿ ಬರುತ್ತಿದ್ದಳು. ಲಿನ್ನಿ ನನ್ನ ಪಕ್ಷವೆಂದು ತಿಳಿದ ಕೂಡಲೇ ಬೇರೆಯವರು ನನ್ನ ತಂಟೆಗೆ ಬರುವುದು ಕಮ್ಮಿಯಾಗಿತ್ತು. ಮೊದಲು ಮನೆಯವರನ್ನು ಬಿಟ್ಟು ಬಂದಾಗ ಉಂಟಾದ ಬೇಸರವು ಲಿನ್ನಿಯ ಸಹವಾಸದಿಂದ ಬಹಳಮಟ್ಟಿಗೆ ಕಮ್ಮಿಯಾಗಿತ್ತು. ದಿನಗಳು ಕಳೆದಂತೆ ನನಗವಳು ಒಡಹುಟ್ಟಿದ ಅಕ್ಕನಿಗಿಂತಲೂ ಆತ್ಮೀಯಳಾಗಿಬಿಟ್ಟಿದ್ದಳು. ಏನಾದರೂ ನಾನವಳಿಗೆ ಹೇಳದಿರುತ್ತಿರಲಿಲ್ಲ. ಕಳೆದ ರಜೆಯಲ್ಲಿ ನಮ್ಮ ಮನೆಗೆ ಬಂದು ಅಮ್ಮನ ಒಲುಮೆಯನ್ನೂ ಅಣ್ಣನ ಆದರವನ್ನೂ ಮೋಹನನ ಪ್ರೀತಿಯನ್ನೂ ಅಪಹರಿಸಿಬಿಟ್ಟಿದ್ದಳು. ಯಾರಾದರೂ ಸರಿ. ಲಿನ್ನಿಯನ್ನು ಪ್ರೀತಿಸದಿರುವುದಕ್ಕಾಗುತ್ತಿರಲಿಲ್ಲ. ಎಲ್ಲರನ್ನೂ ಒಲಿಸಿಕೊಳ್ಳುವಂಥ ಸುಂದರ ಗುಣಗಳು ನನ್ನ ಲಿನ್ನಿಯಲ್ಲಿದ್ದವು. ಆದುದರಿಂದಲೇ ಲಿನ್ನಿ ಪಾಠ ಕಲಿಯದೇ ತಮಾಷೆಯಲ್ಲೇ ಕಾಲ ಕಳೆದಾಗ ಶಿಕ್ಷೆಯನ್ನು ವಿಧಿಸಬೇಕೆಂದಿದ್ದ ಉಪಾಧ್ಯಾಯಿನಿ (ಮದರ್ ) ಅವಳ ಮುಖ ನೋಡಿ ಶಿಕ್ಷೆಮಾಡಲು ಮನವೊಪ್ಪದೆ ಎಷ್ಟೋ ಸಾರಿ ಅವಳನ್ನು ಕ್ಷಮಿಸಿಬಿಟ್ಟಿದ್ದರು.