ಪುಟ:ಕಂಬನಿ-ಗೌರಮ್ಮ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವುಗಳೆಂದರೆ ಬಹಳ ಪ್ರೀತಿ' ಎಂದೆ. ಆತ ಮುಗಳ್ನಗೆ ನಕ್ಕು 'ವಸಂತಗೆ ನನ್ನ ಅವುಗಳ ಮೇಲಿನ ಪ್ರೀತಿ, ಹುಚ್ಚೆಂದು ಚೇಷ್ಟೆ ಮಾಡುವ ಸಾಧನ. ಎಡೆ ಸಿಕ್ಕಿದಾಗಲೆಲ್ಲಾ ನನ್ನನ್ನು ಹುಚ್ಚನೆಂದೆನ್ನುವ ಸುಸಂದರ್ಭವನ್ನು ಅವಳು ಎಂದೂ ಕಳೆದುಕೊಳ್ಳುವುದಿಲ್ಲ' ಎಂದ.

'ನೀವಿಬ್ಬರು ಹುಚ್ಚರೂ ಮಾತಿಗಾರಂಭಿಸಿದರೆ ಕತ್ತಲಾದರೂ ಮುಗಿಯುವಂತಿಲ್ಲ, ಒಳಗೆ ಹೋಗೋಣ' ಎಂದು ಲಿನ್ನಿ ಹೊರಟಳು. ರಾಮವೂ ಬಲು ಮೆಲ್ಲಗೆ ಹತ್ತಿರದಲ್ಲಿದ್ದ ದೊಣ್ಣೆಯೊಂದರ ಸಹಾಯದಿಂದ ಎದ್ದು ನಿಂತ. ನನ್ನ ಆಶ್ಚರ್ಯದ ಮೇಲೆ ಏರಿತು. ಅವನ ಒಂದು ಕಾಲು ಕುಂಟು !

ರಾಮು ಲಿನ್ನಿಯ ಸೋದರತ್ತೆಯ ಮಗ. ಚಿಕ್ಕಂದಿನಲ್ಲಿಯೇ ತಂದೆತಾಯಿಯರನ್ನು ಕಳೆದುಕೊಂಡಿದ್ದ ಅವನನ್ನು ಲಿನ್ನಿಯ ತಾಯಿ ತಂದೆಯರೇ ಸಾಕಿದ್ದರು. ಅದಕ್ಕೇ ಅವರಿಬ್ಬರೊಳಗೆ ಅಷ್ಟೊಂದು ಸಲಿಗೆ. ಸಣ್ಣ ಪ್ರಾಯದಿಂದಲೇ ರಾಮುವಿಗೆ ವಸಂತನನ್ನು ಕೊಡುವುದು ನಿಶ್ಚಯವಾದ ವಿಷಯ. ಆದರೆ ರಾಮು I .C. S. ಪರೀಕ್ಷೆಗೆ ಹೋಗಿದ್ದಾಗ ಕುದುರೆಯಿಂದ ಬಿದ್ದು ಒಂದು ಕಾಲು ಕುಂಟಾದಂದಿನಿಂದ ಅವಳ ತಂದೆತಾಯಿಯರು ಮಗಳನ್ನವನಿಗೆ ಕೊಡಲು ಹಿಂಜರಿಯುತ್ತಿದ್ದರು. ಲಿನ್ನಿ ಮಾತ್ರ ರಾಮವನ್ನು ಮದುವೆಯಾಗದಿದ್ದರೆ ಮದುವೆಯೇ ಬೇಡ ಎಂದು ದೃಢವಾಗಿಯೇ ಹೇಳಿದ್ದಳು. ಆದರ ಅವಳ ತಂದೆತಾಯಿಯರು ಕುಂಟನಿಗೆ ಮಗಳನ್ನು ಕೊಡಲು ಹಿಂದೆಮುಂದೆ ನೋಡುತ್ತಿದ್ದರು. ಅದರಿಂದಲೇ ಎರಡುವರುಷಗಳ ಮೊದಲೇ ಆಗಬೇಕಾಗಿದ್ದ ಲಿನ್ನಿಯ ಮದುವೆ ಇನ್ನೂ ಆಗಿರಲಿಲ್ಲ. ರಾಮು ಕುಂಟನಾದಂದಿನಿಂದ ಅವಳನ್ನು ಮದುವೆಯಾಗಲು ಸಂಕೋಚಪಡುತ್ತಿದ್ದ. ಕುಂಟನಾದ ತನ್ನನ್ನು ಲಿನ್ನಿ ಕರುಣೆಗಾಗಿ ಮದುವೆಯಾಗಬಯಸುವಳೆಂಬ ನಂಬಿಕೆಯಿಂದ ಅವನಿಗೊಂದು ಹುಚ್ಚು-ತಾನು ಜೀವಿಸಲೇ ಯೋಗ್ಯನಲ್ಲವೆಂದು.

೫೧