ಪುಟ:ಕಂಬನಿ-ಗೌರಮ್ಮ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಲಿನ್ನಿಯನ್ನವನು ಪ್ರೀತಿಸುತ್ತಿದ್ದರೂ ತನ್ನ ವ್ಯವಹಾರಗಳಿಂದ ಎಂದೂ ಆ ಪ್ರೀತಿಯನ್ನು ತೋರಗೊಡುತ್ತಿರಲಿಲ್ಲ. ಅವಳು ಅವನೊಡನೆ ಕೂತು ಮಾತಿಗಾರಂಭಿಸಿದರೆ ಅವಳಿಗೆ ನೋವಾಗುವಂತಹ ಮಾತುಗಳನ್ನಾಡಿ ನೋಯಿಸುತ್ತಿದ್ದ, ಹಾಗಾದರೂ ಲಿನ್ನಿ ತನ್ನನ್ನು ಪ್ರೀತಿಸದಿರಲೆಂದು. ಪಾಪ, ಲಿನ್ನಿ ಅವನ ಕಠೋರವ್ಯವಹಾರದಿಂದ ಬಹಳ ದುಃಖಿತಳಾಗುತ್ತಿದ್ದಳು. ಯಾವಾಗಲೂ ನಗು ತುಂಬಿ ತುಳುಕುತ್ತಿದ್ದ ಅವಳ ಕಣ್ಣುಗಳು ಕಣ್ಣೀರುತುಂಬಿರುವುದನ್ನು ನೋಡುವಾಗ 'ತುಂಟಾಟಿಕೆಯ ಲಿನ್ನಿಯ ಹೃದಯಾಂತರಾಳದಲ್ಲಿ ಇಷ್ಟೊಂದು ಪ್ರೇಮ, ಇಷ್ಟೊಂದು ಗಂಭೀರತೆ ಅಡಗಿರಲು ಸ್ಥಳವೆಲ್ಲಿ?' ಎಂದೆನಿಸುತ್ತಿತ್ತು ನನಗೆ. ನಗುವಿನಲ್ಲೇ ಜೀವನವನ್ನು ತೇಲಿಸುತ್ತಿದ್ದ ಲಿನ್ನಿಯ ಮುಖವನ್ನು ವಿಷಾದ ಆವರಿಸಿದಾಗಲೆಲ್ಲ ರಾಮುವಿನ ಮೇಲೆ ಬಹಳ ಕೋಪ ಬರುತ್ತಿತ್ತು. ಹಾಗೇಕೆ ಮಾಡುತ್ತಿರುವೆ ಎಂದವನನ್ನು ಕೇಳಲೇ ಎಂದು ಎಷ್ಟೋ ಸಾರೆ ಯೋಚಿಸಿದೆ. ಆದರೆ ಈ ರೀತಿ ನಾನು ಕೇಳಿದುದು ಲಿನ್ನಿಗೆ ತಿಳಿದರೆ.... ಪರಿಣಾಮವನ್ನು ನೆನಸಿ ಸುಮ್ಮನಾಗುತ್ತಿದ್ದೆ.

ಆರ್ಧೋದಯದ ದಿನ ಬಂತು. ಮುಂದಿನ ದಿನವೇ ನಿಶ್ಚಯವಾದಂತೆ ಎಲ್ಲರೂ ಹೊಳೆಗೆ ಸ್ನಾನಕ್ಕೆ ಹೊರಟೆವು. ಹೊಳೆಯು ದೂರವಾದುದರಿಂದ ನಡೆದು ಹೋದರೆ ಸ್ನಾನ ತೀರಿಸಿ ಮನೆಗೆ ಹಿಂತಿರುಗುವುದು ತಡವಾಗುವುದೆಂದು ಕಾರಿನಲ್ಲೇ ಹೋಗಿ ಬರುವುದೆಂದು ನಿಶ್ಚಯವಾಗಿದ್ದುದರಿಂದ ರಾಮುವೂ ಬರಬಹುದಾಗಿತ್ತು. ಲಿನ್ನಿ, ಅವಳ ತಾಯಿ ತಂದೆ, ನಾನು ಎಲ್ಲರೂ ಅವನನ್ನು ಕರೆದುಕೊಂಡು ಹೋಗಬೇಕೆಂದು ಬಹಳ ಪ್ರಯತ್ನಿಸಿದೆವು. “ನಾನು ಬರುವುದಿಲ್ಲ” ಎಂದು ಎಲ್ಲರಿಗೂ ಒಂದೇ ಅವನ ಪ್ರತ್ಯುತ್ತರ. ಹಿಂದಿನ ದಿನ ಕಾವು ಬರಬಹುದೆಂದು ನಂಬಿಕೆಯಿಂದ ಆನಂದದಿಂದ ಹಿಗ್ಗುತ್ತಿದ್ದ ಲಿನ್ನಿಗೆ ಬಹಳ ಬೇಸರವಾಯಿತು. ಅವಳ ಮನೋಭಾವವನ್ನರಿತು ನನಗೂ ರಾಮುವಿನ ಮೇಲೆ ತಡೆಯಲಾರದಷ್ಟು ಕೋಪಬಂತು. 'ಈ ಆತ್ಮಾಭಿಮಾನಿ ಕುಂಟನಲ್ಲೇನು ಗುಣವನ್ನು ಕಂಡು ಲಿನ್ನಿ ಇವನನ್ನಿಷ್ಟು ಪ್ರೀತಿಸುವಳು !' ಎಂದೆನಿಸಿತು.