ಪುಟ:ಕಂಬನಿ-ಗೌರಮ್ಮ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಳಿಸಿಯೇ ಇರಲಿಲ್ಲ. ಅವಳು ಬರುವುದಿಲ್ಲ ಎಂದು ಬರೆದ ಮೇಲೆ ನಾನೇ ಅಲ್ಲಿಗೆ ಹೋಗುವೆನೆಂದು ನಿಶ್ಚಯಿಸಿಕೊಂಡೆ. ಆದರೆ ಆ ಸಾರಿಯ ರಜೆಯಲ್ಲಿ ಮೋಹನನಿಗೆ ಕಾಯಿಲೆಯಾದುದರಿಂದ ಹೊಗಲಾಗಲಿಲ್ಲ. ಮೋಹನನ ಕಾಯಿಲೆಯಿಂದ ನನ್ನ ಜೀವನವೇ ಪರಿವರ್ತನೆಯಾಯಿತು. ಅವನ ಕಾಯಿಲೆಯನ್ನು ನೋವು ಬರುತ್ತಿದ್ದ ಡಾಕ್ಟರ್‌ ಅರುಣಾದೇವಿ ಕನ್ನಡ ನಾಡಿನ ಮಹಿಳ., ಮೋಹನನ ಕಾಯಿಲೆ ವಾಸಿಯಾಗುವುದುರೊಳಗಾಗಿ ನಮಗಿಬ್ಬರಿಗೂ ಸ್ನೇಹವಾಗಿ ಬಿಟ್ಟಿತ್ತು. ಕೊನೆಗೆ ಅವಳ ಮಾತಿನ ಮೇಲೆ F. A. ಆದ ಮೇಲೆ ಮೆಡಿಕಲ್ ಪರೀಕ್ಷೆಗೆ ಹೋಗಬೇಕೆಂದು ದೃಢಮಾಡಿಕೊಂಡೆ. ಅಮ್ಮನಾಗಲಿ, ಅಣ್ಣನಾಗಲಿ ವಿರೋಧಿಸಲಿಲ್ಲವಾದುದರಿಂದ ಎಂಟು ವರ್ಷಗಳಾಗುವಾಗ ನಾನು M. B. B. S. ಪರೀಕ್ಷೆಯಲ್ಲಿ ಪಾಸಾಗಿ ಡಾಕ್ಟರ್ ಆಗಿ ಬಿಟ್ಟೆ. ಆ ಎಂಟು ವರ್ಷಗಳೂ ಲಿನ್ನಿಗೆ ಕಾಗದಗಳನ್ನು ಬರೆಯುತ್ತಿದ್ದರೂ ಅವಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಅವಳೂ ನಮ್ಮ ಮನೆಗೆ ಬಂದಿರಲಿಲ್ಲ. ಅವಳು ಬರೆಯುತ್ತಿದ್ದ ಕಾಗದಗಳಿಂದ ಮದುವೆಯಾಗುವುದೇ ಇಲ್ಲ ಎನ್ನುವುದು ಅವಳ ಅಭಿಪ್ರಾಯವೆಂದು ನನಗೆ ಗೊತ್ತಾಗಿತ್ತು. ಹಾಗಾಗುವುದಕ್ಕೆ ನಾನೇ ಕಾರಣಳಾದೆನಲ್ಲಾ-ಎನ್ನುವುದು ಮಾತ್ರ ಮತ್ತೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಪರೀಕ್ಷೆಯ ಗಲಾಟೆ ಎಲ್ಲಾ ಮುಗಿದು ಬಿಡುವಾದ ಮೇಲೆ ಅವಳ ಮನೆಗೆ ಹೊರಟೆ. ಹಿಂದಿನ ಅದೇ ಸ್ಥಳ; ಅದೇ ದಾರಿ; ಅದೇ ಮನೆ. ಆದರೆ ಆ ಸಾರಿ ಹೋಗುವುದಕ್ಕೂ ಈ ಸಾರಿ ಹೋಗುವುದಕ್ಕೂ ಎಷ್ಟು ಅಂತರ ! ಆ ಲಿನ್ನಿಗೂ ಈ ಲಿನ್ನಿಗೂ ಅದೆಷ್ಟೊಂದು ವ್ಯತ್ಯಾಸ ! ಹಾಗಾಗುವದಕ್ಕೆ ಕಾರಣ ನಾನು. ಈ ಏಳು ವರ್ಷಗಳಲ್ಲಿ ಲಿನ್ನಿಯ ಜೀವನ ಸಂಪೂರ್ಣವಾಗಿ ವ್ಯತ್ಯಾಸ ಹೊಂದಿತ್ತು. ರಾಮುವನ್ನು ಇನ್ನು ಕಾಣುವುದು ಅಸಾಧ್ಯವೆಂದು ಅವಳಿಗೆ ಗೊತ್ತಿತ್ತು. ಮೊದಲವಳ ಮುಖದಲ್ಲಿ ಅವನನ್ನು ಕಾಣಬಹುದೆಂದು ವಿಂಚುತ್ತಿದ್ದ ಆಸೆಯ ಸ್ಥಾನವನ್ನೀಗ ಶಾಂತಿ ಆವರಿಸಿತ್ತು. ಆಗ ಸುಮ್ಮನೆ ಕೂತು ಯೋಚಿಸಿ ಚಿಂತಿಸುತ್ತಿದ್ದ

೫೭

8