ಪುಟ:ಕಂಬನಿ-ಗೌರಮ್ಮ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಲಿನ್ನಿ ಈಗ ಏನಾದರೂ ಕೆಲಸಗಳನ್ನು ಮಾಡುತ್ತ ಅವನನ್ನು ಮರೆಯಲು ಯತ್ನಿಸುತ್ತಿದ್ದಳು. ಕೆಲಸಗಳು ಮುಗಿದು ಬಿಡುವಾದಾಗ ಕೌಸಲ್ಯಾನಂದನನ ಕತೆಗಳನ್ನು ಓದುತ್ತಿದ್ದಳು. ಮೊದಲು ನಾನು ಅವುಗಳನ್ನು ಓದುವಾಗ ಹುಚ್ಚಿ ಎಂದು ನಗುತ್ತಲಿದ್ದ ಲಿನ್ನಿಗೆ ಈಗವುಗಳ ಮೇಲೆ ತುಂಬಾ ಆದರ ಉಂಟಾಗಿತ್ತು. ಕೇಳಿದರೆ 'ಕೌಸಲ್ಯಾನಂದನನ ಕತೆಗಳನ್ನೋದಿದರೆ ಅದೊಂದು ತರದ ಶಾಂತಿ ದೊರೆಯುತ್ತದೆ ಸೀತಾ, ಬೇಸರವಾದಾಗಲೆಲ್ಲಾ ಅವುಗಳನ್ನೊದಿದರೆ ಸಮಾಧಾನವಾಗುತ್ತಿದೆ' ಎನ್ನುತ್ತಿದ್ದಳು. ನಿಜವಾಗಿಯೂ ಅವನ ಪುಸ್ತಕಗಳಲ್ಲಿ ಆ ಶಕ್ತಿ ಇತ್ತು. ಹೊಸದಾಗಿ ಪ್ರಕಟವಾದ ಅವನ 'ವಸಂತಕುಸುಮಗಳೆಂ'ಬ ಪುಸ್ತಕವಂತೂ ಓದಿದವರು ಅವನನ್ನೆಂದೂ ಮರೆಯದಿರುವಂತೆ ಮಾಡುವ ಪುಸ್ತಕವಾಗಿತ್ತು.

ಮನೆಯಿಂದ ಹೊರಡುವಾಗಲೇ ದೃಢಮಾಡಿಕೊಂಡು ಬಂದಿದ್ದೆ, ಲಿನ್ನಿಗೆ ರಾಮು ಮನೆ ಬಿಡುವುದಕ್ಕೆ ಕಾರಣ ನಾನೆಂದು ಹೇಳಿಯೇ ತೀರಬೇಕೆಂದು. ಹಿಂತಿರುಗಲು ಒಂದು ದಿನ ಮೊದಲಿನ ರಾತ್ರಿ ಬೆಳುದಿಂಗಳಿನಲ್ಲಿ ಅಂಗಳದ ಕೊನೆಯಲ್ಲಿದ್ದ ಮಾವಿನ ಮರದಡಿಯಲ್ಲಿ ಕೂತಿದ್ದಾಗ ಎಲ್ಲಾ ಹೇಳಿ ಅವಳ ಕ್ಷಮೆ ಬೇಡಿದೆ.

'ಸೀತಾ, ಆಗಿ ಹೋದುದಕ್ಕಾಗಿ ಚಿಂತಿಸಿ ಫಲವೇನು ಹೇಳು ? ಕ್ಷಮಿಸೆನ್ನುವಿಯೇಕೆ ? ನಿನಗೆ ಗೊತ್ತಿದೆ, ನನಗೆ ನಿನ್ನ ಮೇಲೆ ಕೋಪವಿಲ್ಲವೆಂದು. ಇನ್ನೆಂದೂ ಆ ವಿಷಯ ಎತ್ತಬೇಡ.'

ಲಿನ್ನಿಯೊಡನೆ ಹೇಳಿ ಅವಳ ಕ್ಷಮೆ ಬೇಡಿದ ಮೇಲೆ ಹೊತ್ತ ಹೊರೆ ಇಳಿಸಿದಷ್ಟು ಸುಖವಾಯಿತು. ಅವಳ ಮುಖ ನೋಡಿ ಮಾತಾಡಲು ಧೈರ್ಯವಾಯ್ತು. ಮರುದಿನ ಹೊರಡುವಾಗ ಲಿನ್ನಿಯ ನನ್ನೊಡನೆ ನಮ್ಮ ಮನೆಗೆ ಬಂದಳು.


ಲಿನ್ನಿ ನಮ್ಮ ಮನೆಗೆ ಬಂದು ಎಂಟು ದಿನಗಳಾಗಿದ್ದವು. ಡಾಕ್ಟರ್ ಅರುಣಾ ದೇವಿಗೂ ಅವಳಿಗೂ ಪರಿಚಯವನ್ನು ಮಾಡಿಸುವುದರ ಸಲುವಾಗಿ ಆ ದಿನ ಅವಳನ್ನು ಅವರ ಮನೆಗೆ ಕರೆದುಕೊಂಡು ಹೋದೆ. ನಾವು