ಪುಟ:ಕಂಬನಿ-ಗೌರಮ್ಮ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋಗುವಾಗ ಅವಳೊಬ್ಬಳೇ ಕುಳಿತುಕೊಂಡು ಹೊಲಿಯುತ್ತಿದ್ದಳು. ಲಿನ್ನಿಯನ್ನು ನೋಡಿ ಅವಳಿಗೆ ತುಂಬಾ ಸಂತೋಷವಾಯಿತು. ಅರುಣಾದೇವಿಗೆ ಸಂಗೀತವೆಂದರೆ ಬಹಳ ಇಷ್ಟ. ಇಬ್ಬರು ಸಂಗೀತ ಪ್ರೇಮಿಗಳು ಸೇರಿದಾಗ ಸಂಗೀತದ ಗಂಧವೇ ಗೊತ್ತಿಲ್ಲದ ನಾನು ಅವರೊಡನೆ ಮಾತಾಡುವುದಾದರೂ ಏನು ! ಒಂದು ಮೂಲೆಯಲ್ಲಿ ಕೂತು ಮೇಜಿನ ಮೇಲಿದ್ದ ಕೌಸಲ್ಯಾನಂದನನ ಪುಸ್ತಕವೊಂದನ್ನು ತೆಗೆದು ಓದತೊಡಗಿದೆ. ನಾನು ಆ ಪುಸ್ತಕವನ್ನು ತೆಗೆದುದನ್ನು ನೋಡಿ 'ಸೀತಾ, ಅಣ್ಣನೂ ಕೌಸಲ್ಯಾನಂದನನೂ ಬೆಳಗಿನ ರೈಲಿನಲ್ಲಿ ಬಂದಿದ್ದಾರೆ. ಈಗೆಲ್ಲೋ ತಿರುಗಾಡಲು ಹೋಗಿರುವರು. ನಿನ್ನ ಮೆಚ್ಚಿಕೆಯ ಕತೆಗಳ ಲೇಖಕನನ್ನು ಏಳು ಗಂಟೆಯವರೆಗಿದ್ದರೆ ನೋಡಬಹುದು' ಎಂದಳು. ನನಗೂ ಲಿನ್ನಿಗೂ ಇಬ್ಬರಿಗೂ ಕೌಸಲ್ಯಾನಂದನನನ್ನು ನೋಡುವ ಆಸೆ ಬಹಳ ಇತ್ತು. ಅದುದರಿಂದ ಅವನನ್ನು ನೋಡುವ ಸುಯೋಗ ಸಿಕ್ಕಿದುದಕ್ಕೆ ಬಹಳ ಸಂತೋಷವಾಯಿತು.

ತಿರುಗಾಡಲು ಹೋದವರು ಎಷ್ಟು ಹೊತ್ತಿಗೆ ಹಿಂತಿರುಗಬಹುದು ? ಎಂಬ ತವಕದಿಂದ ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದೆ. ಆರುಣಾದೇವಿ ಲಿನ್ನಿಯ ಇದಿರು ಹಾರ್ಮೋನಿಯಮ್ ಇಟ್ಟು ಬಾರಿಸುವಂತೆ ಹೇಳುತ್ತಿದ್ದಳು. ಲಿನ್ನಿ ಹಾರ್ಮೋನಿಯಮ್ ಬಾರಿಸುತ್ತ ಹಾಡಲು ತೊಡಗಿದೊಡನೆ ಪುಸ್ತಕವನ್ನು ಮುಚ್ಚಿ ಬೇರೆ ಎಲ್ಲವನ್ನೂ ಮರೆತು ಕೇಳತೊಡಗಿದೆ. ಅರುಣಾದೇವಿಯಂತೂ ಮಂತ್ರಮುಗ್ಧಳಾದವಳಂತೆ ಲಿನ್ನಿಯನ್ನೇ ಎವೆಯಿಕ್ಕದೆ ನೋಡುತ್ತ ಪ್ರತಿಮೆಯಂತೆ ಕೂತಿದ್ದಳು. ಲಿನ್ನಿಯು ಸ್ವರ ಅಷ್ಟು ಇಂಪು; ಹಾಡುವ ಹಾಡು ಅಷ್ಟೊಂದು ಭಾವ ಪೂರ್ಣವಾದುದು-ಲೈಲಾ ಮತ್ತು ಮುಜನುವಿನ ಪ್ರೇಮಗೀತೆ. ಲಿನ್ನಿಯ ಜೀವನವು ಚೆನ್ನಾಗಿ ತಿಳಿದ ನನಗೆ ಅವಳು ಆ ಮಧುರ ಸ್ವರದಲ್ಲಿ ಆ ಮನೋಹರ ಗೀತೆಯನ್ನು ಹಾಡುವಾಗ ಕಣ್ಣೀರು ತಡೆಯಿಲ್ಲದೆ ಹರಿಯತೊಡಗಿತು. ಅರುಣಾದೇವಿಯ ಹರಿಯುವ ಕಣ್ಣೀರಿನ ಪರಿವೆಯಿಲ್ಲದೆ ಲಿನ್ನಿಯ ಮುಖವನ್ನೇ ನೋಡುತ್ತಾ ಬೆಪ್ಪಾಗಿ ಕೂತು ಬಿಟ್ಟಿದ್ದಳು.

೫೯