ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಾವಣನ ದಿಗ್ವಿಜಯವು
17

 ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕೊಸ್ಕರ ಸಂತೋಷಿಸಿ ಲೋಕಗಳೆಲ್ಲವೂ ಗಂಭೀರಧ್ವನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ' ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು; ಅಲ್ಲಿಂದ ಹೊರಟು ತೋಳ್ದೀಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲವೆಂದು ಆಲೋಚಿಸುತ್ತ, ಗಗನ ಮಾರ್ಗದಲ್ಲಿ ಬರುತ್ತಿರಲು; ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು; ಆ ಮುನೀಂದ್ರನು ಹರಸಿ-ಎಲೈ ಲಂಕಾಧೀಶನೇ, ನಿನಗೆ ಸೌಖ್ಯವೇ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ--ಈಗ ನಿನ್ನ ಶೌರ್ಯೋದ್ರೇಕವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಬರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದಲ್ಲವು, ಈ ಮನುಷ್ಯರಲ್ಲಿ ನಿನಗೆ ಎದುರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲವು, ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ಯ ವುಂಟಾದೀತೇ ? ಎಂದಿಗೂ ಇಲ್ಲವು. ಈ ನರರು ಅಲ್ಪಾಯುಷ್ಕರು ಮತ್ತು ರೋಗ ಶೋಕ ಕ್ಷುತ ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶರಾಗುವವರು, ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಟರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ದದಲ್ಲಿ ಅವರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು, ಅವರೊಳಗೆ ತೆಂಕಣದೆಸೆಗೊಡೆಯನಾದ ಯಮನೆಂಬವನು ಕಾಲದಂಡವನ್ನು ಧರಿಸಿದವ ನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳ ಕ್ಷೇಮದಿಂದಿರುವುವು ಎನ್ನಲು ; ರಾವಣನು--ಎಲೈ ಮುನೀಂದ್ರನೇ, ನೀನು ಹೇಳಿದ ಮಾತು ಯುಕ್ತವೇ ಸರಿ, ನಾನು ಹೀಗೆಯೇ ಯೋಚಿಸುತ್ತಿದ್ದೆನು, ನೀನು ಹೇಳಿದಂತೆ ದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನನ್ನು ಮೊದಲೇ ಜಯಿಸಿದ್ದೇನೆ, ಇನ್ನು ಯಮವರುಣೇಂದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನಗರೇ ಮೊದಲಾದವರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರಡಲು ; ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ಕ್ರುನಾಗಿ ಅವನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು, ಅವನನ್ನು ಕಾಲದಂಡದಿಂದ ಬಡಿದು ಕೊಂದುಹಾಕು. ಲೋಕಕ್ಕೆಲ್ಲಾ ಕ್ಷೇಮವುಂಟಾಗುವದೆಂದು ಹೇಳಿ ಹೊರಟುಹೋದನು.

ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ; ನರಕಗಳಲ್ಲಿ ಯಮದೂತರು ಪಾಪಾತ್ಮರನ್ನು ಹಿಡಿದು ಕಾಯ್ದ ಮಳಲಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿಂದ