ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಿಕೆ ಕನಕದಾಸರು ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತುಹೋಗಿರುವ ಒಬ್ಬ ಧೀಮಂತ ವ್ಯಕ್ತಿ. ದಾಸ ಸಾಹಿತ್ಯದಲ್ಲಿ ಅವರದು ವೈಶಿಷ್ಟ್ಯಪೂರ್ಣವಾದ ವರ್ಚಸ್ಸು, ಸಾಮಾನ್ಯ ಬದುಕಿನಿಂದ ಒಡಮೂಡಿ, ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ಸಾಂಸ್ಕೃತಿಕ ಜಗತ್ತಿಗೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಮಾನವತೆಯನ್ನು ಮೆರೆದ ಕ್ರಾಂತಿಕಾರಿ ಕವಿ, ಅವರು ತಮ್ಮ ಬದುಕು ಮತ್ತು ಕೃತಿಗಳ ಮೂಲಕ ಪ್ರತಿಪಾದಿಸಿರುವ ಜೀವನದರ್ಶನ ಸಾರ್ವಕಾಲಿಕ ; ವಿಚಾರಪೂರ್ಣ. ತಮ್ಮ ಕೀರ್ತನೆ ಹಾಗೂ ಕಾವ್ಯಗಳಲ್ಲಿ ಕಾವ್ಯಗುಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು, ದೇಸೀ ಸತ್ಯವನ್ನು ಮೆರೆದಿದ್ದಾರೆ. ಈ ಸಂತ ಶ್ರೇಷ್ಠ ಕವಿಯ ೫೦೦ನೆಯ ಜಯಂತ್ಯುತ್ಸವವನ್ನು ರಚನಾತ್ಮಕವಾಗಿ ಹಾಗೂ ಅರ್ಥವತ್ತಾಗಿ ಆಚರಿಸಲು ಸರ್ಕಾರವು ತೀರ್ಮಾನಿಸಿತು. ೧೯೮೮ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಯಿತು. ವರ್ಷಾದ್ಯಂತ ನಾಡಿನ ಎಲ್ಲೆಡೆ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸುವುದರ ಜೊತೆಗೆ ಕನಕದಾಸರ ಸಮಗ್ರ ಕೃತಿಗಳು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡುವ ದಿಸೆಯಲ್ಲಿ ಪ್ರಕಟನಾ ಯೋಜನೆಯೊಂದನ್ನು ಕೈಗೊಳ್ಳಲಾಯಿತು, ಸರ್ಕಾರವು ಡಾ. ದೇ. ಜವರೇಗೌಡ, ಪ್ರೊ. ಎಲ್.ಎಸ್. ಶೇಷಗಿರಿರಾವ್. ಪೊ. ಹೆಚ್.ಜೆ. ಲಕ್ಕಪ್ಪಗೌಡ ಹಾಗೂ ಡಾ. ದೇವೇಂದ್ರ ಕುಮಾರ್ ಹಕಾರಿ ಇವರನ್ನೊಳಗೊಂಡಂತೆ ಒಂದು ಸಂಪಾದಕ ಮಂಡಳಿಯನ್ನು ರಚಿಸಿತು. ಇವರು ಮೊದಲಿಗೆ ಸಂಪಾದಿಸಿಕೊಟ್ಟ “ಜನಪ್ರಿಯ ಕನಕ ಸಂಪುಟ'ವನ್ನು ಸುಲಭ ಬೆಲೆಯಲ್ಲಿ ಪ್ರಕಟಿಸಲಾಯಿತು, ಅದಕ್ಕೆ ದೊರೆತ ಅಪಾರ ಜನಪ್ರಿಯತೆಯನ್ನು ಪರಿಗಣಿಸಿ, ಅದರ ಎರಡನೆಯ ಮುದ್ರಣವನ್ನು ಹೊರತರಲಾಯಿತು. ಪ್ರಸಕ್ತ, ಸಂಪಾದಕ ಮಂಡಳಿಯು ಸಂಪಾದಿಸಿ ಕೊಟ್ಟಿರುವ “ಕನಕ ಸಾಹಿತ್ಯ ದರ್ಶನ-ಸಂಪುಟ-೧” ಗ್ರಂಥ ಪ್ರಕಟವಾಗುತ್ತಿದೆ. ಇದು ಕನಕದಾಸರ ಸಮಗ್ರ ಸಾಹಿತ್ಯವನ್ನು ಕುರಿತು ಎಲ್ಲ ನಿಟ್ಟಿನಿಂದ ವಿವೇಚಿಸಿ, ಮೌಲ್ಯಮಾಪನ ಮಾಡಿರುವ ಲೇಖನಗಳ ಸಂಕಲನ. ನಾಡಿನ ಪ್ರತಿಭಾನ್ವಿತ ವಿದ್ವಾಂಸರು ತಮ್ಮ ಅಮೂಲ್ಯ ಲೇಖನಗಳಿಂದ ಈ ಗ್ರಂಥದ ಗೌರವವನ್ನು ಹೆಚ್ಚಿಸಿದ್ದಾರೆ. ಈ ಬೃಹತ್ ಕೃತಿ ಕನ್ನಡಿಗರಿಗೆ ಕನಕದಾಸರ ಜೀವನ ದರ್ಶನ ಹಾಗೂ ಸಾಹಿತ್ಯಕ ಕೊಡುಗೆಗಳ ಸಮಗ್ರ ಪರಿಚಯವನ್ನು ಮಾಡಿಕೊಡುತ್ತದೆಂಬುದರಲ್ಲಿ ಸಂಶಯವಿಲ್ಲ.