ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನಕದಾಸರ ಸಮಗ್ರ ಜೀವನ ಚರಿತ್ರೆ ಡಾ. ಸಾ. ಶಿ. ಮರುಳಯ್ಯ ಒಂದು ಪರ್ಷಿಯಾ ದೇಶದ ಓರ್ವ ದಾರ್ಶನಿಕ ಕವಿ ಒಂದೆಡೆಯಲ್ಲಿ ಹೀಗೆ ಹೇಳಿದ್ದಾನೆ : ಮಾ ಜಿ ಅಫಜ್ ಓ ಜಿ ಅಂಜಾಮಿ ಜಹಾನ್ ಬಿ-ಖಬರ್-ಇಮಾ ಅವ್ವಾಲ್-ಓ-ಚಿಖರೀ ಇನ್ ಕುಹಾ ಕಿಬಾತ್ ಉಸ್ತಾದ್ ಅಸ್ಟ್ ಎಂದು-ಅಂದರೆ, ಮೊದಲ ಹಾಗೂ ಕಡೆಯ ಪುಟಗಳನ್ನು ಕಳೆದುಕೊಂಡ ಪುಸ್ತಕ ಈ ವಿಶ್ವ ಈ ಪುಸ್ತಕ ಹೇಗೆ ಪ್ರಾರಂಭ ವಾಯಿತು ಗೊತ್ತಿಲ್ಲ ; ಹೇಗೆ ಮುಕ್ತಾಯ ಆಗಿದೆ ತಿಳಿದಿಲ್ಲ. ಮಾನವ ತನಗೆ ಬುದ್ದಿ ಬಂದಾಗಿನಿಂದಲೂ ಕಳೆದುಹೋದ ಆ ಪುಟಗಳನ್ನು ಹುಡುಕುತ್ತಿದ್ದಾನೆ, ಈ ಹುಡುಕುವಿಕೆ ಮತ್ತು ಅದರ ಪರಿಣಾಮ ಇವುಗಳನ್ನು ತಮ್ಮ ಜಿಜ್ಞಾಸೆ ಎಂದು ಕರೆಯುತ್ತಾರೆ. ಇಂಥದೇ ಅನ್ವೇಷಣೆ ಸಂತಕವಿ ಕನಕದಾಸರ ಬಗೆಗೆ ಇತ್ತೀಚಿನ ದಿನಗಳಲ್ಲಿ ನಡೆದಿದೆ. ಈ ಕಾರ್ಯ ಇನ್ನೂ ಮುಗಿದಿಲ್ಲ, ಮುಗಿಯುವಂತೆ ಕಾಣುವುದೂ ಇಲ್ಲ. ಹಾಗಂದುಕೊಂಡು ಕೈಚೆಲ್ಲಿ ಕೂರುವಂತೆಯೂ ಇಲ್ಲ. ಕನಕದಾಸರ ಜೀವನ ಚರಿತ್ರೆಯು ಮೊದಲ ಮತ್ತು ಕಡೆಯ ಪುಟಗಳನ್ನು ಕಳೆದುಕೊಂಡ ಸಂಪುಟವಾದರೂ ಅವರೇ ರಚಿಸಿದರೆನ್ನಲಾದ ಕೀರ್ತನೆಗಳು ಮತ್ತು ಕಾವ್ಯಗಳು ಎಂಬ ಪಠ್ಯಭಾಗ ಲಭ್ಯವಿದೆ. ಈ ಉಪಲಬ್ಲಿಯನ್ನು ಹೆಕ್ಕಿ ನೋಡಿ, ಇಲ್ಲವೆ ಹಲವು ಸ್ಥಳೀಯ ಐತಿಹ್ಯಗಳನ್ನು ಆಧರಿಸಿ, ಇಲ್ಲವೆ ಕೆಲವು ಉಲ್ಲೇಖ ಉದ್ದರಣೆಗಳನ್ನು ಮಾನ್ಯಮಾಡಿ, ಕಳೆದುಹೋಗಿರುವ ಪುಟಗಳನ್ನು ಪುನಃ ರಚಿಸಬಹುದಾಗಿದೆ. ಪ್ರಸಕ್ತ ರಚನೆ ಆ ಸಂಬಂಧದ ಅಧಿಕೃತ ಮಾಹಿತಿ ದೊರೆಯುವವರೆಗೆ ಮಾನ್ಯ.