ಕನ್ನಡ ಪರಮಾರ್ಥ ಸೋಪಾನ
ಉದಯಾಸ್ತಿಲ್ಲದ ಬೆಳಗಿನ ಪ್ರಭೆಯು | ತುದಿಮೊದಲಿಲ್ಲದೆ ತುಂಬಿತು ಪೂರ್ಣಾ |
ಬುಧಜನರನುದಿನ ಸೇವಿಸುತಿರುವ | ಸದಮಲವಾದ ಸದಾ ಸವಿ ಸುಖಾ
ವಿಹಿತ ವಿವೇಕದ ಅನುಭವ ಗೂಡಿ | ಬಾಹ್ಯಾಂತರದಲ್ಲಿ ಘನ ತೋರುತಲಿಹ ||
ಸ್ವಹಿತ ಸುಖದ ಸುಧಾರಸಗರೆವಾ | ಮಹಿಪತಿ ಗುರುಕರುಣದ ಕೌತುಕ
ನಿಜವಾದ ಬ್ರಾಹ್ಮಣನು ಪಡೆಯುವ ಬಗೆಬಗೆಯ ಅನುಭಾವಗಳು ( ರಾಗ-ಮಾಂಡ, ತಾಲ-ಕೇರವಾ)
ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ | ಅವನೀಗ ಬ್ರಾಹ್ಮಣನು
ಬ್ರಹ್ಮಭೇದವೆಂದು ಜಗವನು ಕಂಡವ | ಅವನೀಗ ಬ್ರಾಹ್ಮಣನು
ಮೂಗಲಿ ವಾಯುವ ತುಂಬಿ ಎಳೆಯುವ | ಅವನೀಗ ಬ್ರಾಹ್ಮಣನು ||
ನಾಗಸ್ವರದ ಧ್ವನಿ ಕಿವಿಯಲಿ ಕೇಳುವ ಅವನೀಗ ಬ್ರಾಹ್ಮಣನು ||
ಬೇಗನೆ ನೆಲೆ ನೆಲೆ ಅರನ್ನು ಆಡರುವ | ಅವನೀಗ ಬ್ರಾಹ್ಮಣನು ||
ವೇಗದಿ ಚಂದ್ರನ ಮಂಡಲದಮೃತವನು | ಉಂಡವ ಬ್ರಾಹ್ಮಣನು
ಮುತ್ತಿನ ಮಳೆಹನಿ ಉದುರುವಾಗ | ತೊಯ್ಯದವ ಬ್ರಾಹ್ಮಣನು ||
ಎತ್ತೆತ್ತ ನೋಡಲು ಸೂಸು ಬೆಳದಿಂಗಳ | ಕಾಣುವ ಬ್ರಾಹ್ಮಣನು ||
ಮತ್ತೆ ದ್ವಿದಳದ ಸಿಂಹಾಸನದಲಿ | ಕುಳಿತವ ಬ್ರಾಹ್ಮಣನು ||
ಉತ್ತಮ ಸಹಸ್ರ ಕಮಲವೇರಿಕೆಯಲಿ | ಸೇರುವ ಬ್ರಾಹ್ಮಣನು