ಕನ್ನಡ ಪರಮಾರ್ಥ ಸೋಪಾನ
ಜೀವದ ಇಚ್ಛಿಲೆ ಆಗುವದಿಲ್ಲ | ಶಿವನ ಇಚ್ಛೆ ನಡಿಸುವದೆಲ್ಲ |
ಗುರುಲಿಂಗ ಜಂಗಮನ ಪಾದಕ ಹೊಂದಿ | ದೋಷವ ಕಳಕೊಳ್ಳೋ ಸಾಂಬಾ
ಮಾನವನ ವಿಚಾರ-ಆಚಾರಗಳಿಗೆಲ್ಲ ಪರಮಾತ್ಮನೆ ಹೊಣೆಗಾರ
[ರಾಗ-ಭೈರವಿ (ಕರ್ನಾಟಕಿ), ತಾಲ- ದೀಪಚಂದಿ]
ನನ್ನಿಂದ ನಾನು ಜನಿಸಿ ಬಂದೆನೆ ಕೃಷ್ಣಾ | ಲೇಶವಾದರೂ ನನ್ನಾಧೀನವಿದ್ದರೆ ತೋರು || ಪ ||
ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ ನಿನ್ನದು ತಪ್ಪೋ ಎನ್ನದು ತಪ್ಪೋ ಪರಮಾತ್ಮ || ಅ.ಪ. ||
ಎಲವುಗಳೆಲ್ಲ ಜೊತೆಮಾಡಿ ನರಗಳ | ಹೊಲೆಚರ್ಮವ ಹೊದಿಸಿ ದೇಹದೊಳು || ಮಲಮೂತ್ರಗಳನ್ನು ಬಲಿಸಿ ಹೃದಯದಲ್ಲಿ | ನೆಲಸಿ ಚೇತನವನಿತ್ತವ ನೀನಲ್ಲವೆ
ಜನನಿಯ ಜಠರದಿ ನವಮಾಸವು | ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದ | ಘನದಿ ನೀ ಪೋಷಿಸುತಿರೆ ನಾನು || ವನಜಾಕ್ಷಾ ನೂಕಿದವನು ನೀನಲ್ಲವೆ
ಜನಿಸಿದಾರಭ್ಯ ಇಂದಿನ ಪರಿಯಂತ | ಘನ ಘನ ಪಾಪ ಸುಕರ್ಮಂಗಳ || ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ | ಅನುಭವಿಸುವದು ನಾನೂ ನೀನೋ ದೇವಾ
ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯನ | ಮುಂದಾಡಿ ತಪ್ಪಿ ಗುಂಡಿಗೆ ಕೆಡಹಲು || ಅಂಧಕನ ತಪ್ಪೋ ಮುಂದಾಳಿನ ತಪ್ಪೋ | ಹಿಂದಾಡಬೇಡ ಎನ್ನಲ್ಲಿ ತಪ್ಪಿಲ್ಲವೋ