ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಬಂಧ ೨ ವಚನ ಸಾಹಿತ್ಯ ಮತ್ತು ಸಂಗೀತ ವಚನಸಾಹಿತ್ಯ ಕನ್ನಡ ಸಾರಸ್ವತ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. * ವಿಶ್ವಸಾಹಿತ್ಯದಲ್ಲಿಯೂ ಅದಕ್ಕೆ ಸ್ಥಾನವಿದೆ. ಕನ್ನಡಿಗರ ಅನಾದರ, ಆಲಸ್ಯದಿಂದ ಅದು ತನ್ನ ಪೂರ್ಣಪ್ರಭೆಯನ್ನು ಬೀರಲಾಗಿಲ್ಲ. ವಚನಸಾಹಿತ್ಯ ವೀರಶೈವ ಮತತತ್ವಗಳನ್ನು ತಿಳಿಸುವುದಾದರೂ ಅದರ ವ್ಯಾಪ್ತಿ ಅಲ್ಲಿಗೇ ನಿಲ್ಲಲಿಲ್ಲ. ವಚನಸಾಹಿತ್ಯವನ್ನು ವೀರಶೈವ ಸಾಹಿತ್ಯ ಎಂದೇ ಪರಿಗಣಿಸುವುದರಿಂದ ಅನ್ಯಾಯವಾದಂತಾಗುವುದು. ತಮ್ಮ ವಿಚಾರ, ಅನುಭಾವ, ಪಾಂಡಿತ್ಯವನ್ನು ವ್ಯಕ್ತಪಡಿಸುವುದಕ್ಕೆ ವಚನಮಾರ್ಗವನ್ನು ಅವಲಂಬಿಸಿದ ಶಿವಶರಣರು ಇಡಿಯ ವಿಶ್ವ ಕಲ್ಯಾಣವನ್ನು ತಮ್ಮ ಗುರಿಯನ್ನಾಗಿ ಇಟ್ಟುಕೊಂಡಿದ್ದರೆಂಬುದು ನಿರ್ವಿವಾದ. ಪಂಡಿತರಿಗೆ ಮಾತ್ರ ಅರ್ಥವಾಗುವ ಚಂಪೂಪದ್ದತಿಯನ್ನು ಬಿಟ್ಟು ಕೊಟ್ಟು ಅವರು ಸು ಲ ಭ ವೂ, ಸರಳವೂ, ಹೃದಯಂಗಮವೂ ಆದ ವಚನರೂಪವನ್ನು ಅವಲಂಬಿಸಿದುದೇ ಅವರ ವಿಶ್ವ ಭಾವನೆಯ ಕುರುಹಾಗಿದೆ. ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಹಿರಿಯ ಶರಣರಾಗಿದ್ದುದು ಮಾತ್ರವಲ್ಲದೆ ಹಿರಿಯ ಪಂಡಿತರೂ ಆಗಿದ್ದರು. ಪಂಡಿತರಿಗೂ ವಿವಿಧ ಕಳಾಪಂಡಿತರಿಗೂ ಪ್ರಿಯವಾಗುವ ಕಾವ್ಯಗಳನ್ನು ರಚಿಸುವುದು ಅವರಿಗೆ ಸುಲಭಸಾಧ್ಯವಾಗಿತ್ತು. ವಚನಸಾಹಿತ್ಯವನ್ನು ಅವರಿಗೂ ಪೂರ್ವದಲ್ಲಿದ್ದ ದೇವರ ದಾಸಿಮಯ್ಯ, ಮೆರೆಮಿಂಡಯ್ಯ, ಬಿಬ್ಬ ಬಾಚಯ್ಯ, ಏಲೇಶ್ವರದ ಕೇತಯ್ಯ, ಆದಯ್ಯ, ಕಾವಿನಾಳ ಕಲ್ಲಯ್ಯ, ಮಾದರ ಧೂಳಯ್ಯ ಮೊದಲಾದವರು ಕ್ರಿ. ಶ. ೧೦೪೦ರಲ್ಲಿ ಮತ್ತು ಅದಕ್ಕೂ ಪೂರ್ವದಲ್ಲಿ ಬಳಸಿಕೊಂಡಿದ್ದರೂ ಜನಪದದಲ್ಲಿ ಅದರ ಪ್ರಭಾವವನ್ನು ಬೀರಿದ ಕೀರ್ತಿ ಬಸವಣ್ಣನಿಗೇ ಸಲ್ಲತಕ್ಕುದಾಗಿದೆ. ದರ್ಶನಗಳ ಸರಸರ್ವಸ್ವವನ್ನು ಕನ್ನಡಿಗರಿಗೆ ಸುಲಭವಾಗಿ ನಿರೂಪಿಸುವ ಒಂದು ಸಾಧನ ಅಗತ್ಯವಾಗಿತ್ತು. ಬಸವಾದಿ ಪ್ರಮಥರು ವಚನವನ್ನು ದರ್ಶನನಿರೂಪಣೆಗೆ ಉಪಯೋಗಿಸಿ ಕೊಂಡುದಲ್ಲದೆ, ಸ್ವಾನುಭವನಿರೂಪಣೆಗೂ ವಚನವನ್ನು ಒಗ್ಗಿಸಿಕೊಂಡರು.