ಪುಟ:ಕರ್ನಾಟಕ ಗತವೈಭವ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಕರ್ನಾಟಕ ಗತವೈಭವ


ಈ ಬಗೆಯಾಗಿ ನಾವು ಈ ಪ್ರಕರಣದಲ್ಲಿ ಕಲಚೂರ್ಯ ಯಾದವ ಮುಂತಾದ ಅನೇಕ ರಾಜವಂಶಗಳನ್ನು ಹೇಳಿದೆವು. ಕಲ್ಯಾಣ ಚಾಲುಕ್ಯರ ನಂತರ ಕಲಚೂರ್ಯರು ಅವರ ರಾಜ್ಯಕ್ಕೆ ಅರಸರಾಗಿ ಆಳಿದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ಆ ರಾಜ್ಯವು ಎರಡು ತುಂಡಾಗಿ ಉತ್ತರದ ಅರ್ಧ ಭಾಗವು ದೇವಗಿರಿ ಯಾದವರ ವಶಕ್ಕೂ ದಕ್ಷಿಣದ ಅರ್ಧ ಭಾಗವು ಹೊಯ್ಸಳ ಯಾದವರ ವಶಕ್ಕೂ ಹೋಯಿತೆಂದು ಸ್ಥೂಲಮಾನದಿಂದ ಹೇಳಬಹುದು. ಮುಂದೆ ಇವುಗಳಲ್ಲಿ ಉತ್ತರ ಭಾಗವು ಹಿಂದೂ ಜನರ ಕೈಬಿಟ್ಟು ಹೋಯಿತು. ದಕ್ಷಿಣ ಭಾಗಕ್ಕೆ ವಿಜಯನಗರದ ಅರಸರು ಒಡೆಯರಾದರು. ಇರಲಿ, ಅವರ ಇತಿಹಾಸವನ್ನು ಮುಂದೆ ಕೊಡುವೆವು. ಸದ್ಯಕ್ಕೆ ಹೇಳುವುದೇನೆಂದರೆ, ಇವೆರಡು ವಂಶಗಳೂ ಸ್ವತಂತ್ರ ರಾಜವಂಶಗಳು. ಮಿಕ್ಕವುಗಳು ಎಂದರೆ ರಟ್ಟಿ, ಶಿಲಾಹಾರ, ಕದಂಬ ಮುಂತಾದುವುಗಳು ಮಾಂಡಲಿಕ ರಾಜವಂಶಗಳೆಂಬುದನ್ನು ವಾಚಕರು ಮರೆಯಕೂಡದು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕದಂಬರಲ್ಲಿ ಎರಡು ಶಾಲೆಗಳಿದ್ದಂತೆ ಕಂಡುಬರುತ್ತದೆ. ಬನವಾಸಿ ಅಥವಾ ಹಾನಗಲ್ಲದ ಕದಂಬರ ಶಾಖೆಯೇ ಮೊದಲನೆಯದು. ಗೋವೆ ಅಥವಾ ಹಲಸಗಿಯ ಕದಂಬರ ಶಾಖೆಯೇ ಎರಡನೆಯದು. ಮೊದಲನೆಯ ಶಾಖೆಯಲ್ಲಿ ಕೀರ್ತಿವರ್ಮ, ಶಾಂತಿವರ್ಮ, ಮಲ್ಲಿಕಾರ್ಜುನ, ಕಾಮದೇವ, ಸೋಮದೇವ ಮುಂತಾದ ಮಾಂಡಲಿಕ ರಾಜರು ಪ್ರಬಲರಾಗಿದ್ದು ಅವರು ಚಾಲುಕ್ಯರಿಗೆ ಅನೇಕ ಮಹತ್ವದ ಪ್ರಸಂಗಗಳಲ್ಲಿ ಸಹಾಯ ಮಾಡಿದ್ದಾರೆ. ಎರಡನೆಯ ಶಾಖೆಯ ರಾಜಧಾನಿಯು ಕೆಲವು ಕಾಲ ಗೋವೆಯಲ್ಲಿಯೂ ಕೆಲವು ಕಾಲ ಹಲಸಗಿಯಲ್ಲಿಯೂ ಇತ್ತು. ಇವರಲ್ಲಿಯ ವಿಜಯಾದಿತ್ಯ, ಜಯಕೇಶಿ ಮುಂತಾದವರು ಚಾಲುಕ್ಯರ ಮಾಂಡಲಿಕರಾಗಿ ಹೆಸರಿಗೆ ಬಂದರು.
ಸಾರಾಂಶ:- ಈ ಪ್ರಕರಣದಲ್ಲಿ ಹೇಳಿದ ರಾಜವಂಶಗಳಲ್ಲಿ ಕಲಚೂರ್ಯ ದೇವಗಿರಿ ಯಾದವ ಮತ್ತು ಹೊಯ್ಸಳ ಯಾದವ ಈ ವಂಶಗಳು ಸ್ವತಂತ್ರವಾಗಿ ಆಳಿದ ವಂಶಗಳೆಂಬುದನ್ನೂ ಶಿಲಾಹಾರ, ರಟ್ಟ, ಕದಂಬ ಮುಂತಾದುವುಗಳು ಮಾಂಡಲಿಕ ರಾಜರ ಮನೆತನಗಳೆಂಬುದನ್ನೂ ವಾಚಕರು ನೆನಪಿನಲ್ಲಿಡಬೇಕು.