ಪುಟ:ಕರ್ನಾಟಕ ಗತವೈಭವ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರ್ನಾಟಕ ಇತಿಹಾಸ-ಮಂಡಲ,

ಧಾರವಾಡ.


(ಸ್ಥಾಪನೆಯಾದ ತಾರೀಖು ೨೮-೯-೧೯೧೪.)

೧. ಈ ಮಂಡಲವು ಕರ್ನಾಟಕ ಇತಿಹಾಸದ ಸಂಶೋಧನಕ್ಕಾಗಿ ಈಗ ಸುಮಾರು ಐದು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿತು. ಇಂದಿನವರೆಗೆ ಕರ್ನಾಟಕ- ಭಾ ಷಾಭಿವೃದ್ಧಿಯ ಪ್ರಯತ್ನವನ್ನೇನೂ ಅನೇಕರು ಕೈಕೊಂಡಿರುವರು. ಆದರೆ ರಾಷ್ಟ್ರಕ್ಕೆ ಜೀವನ ಭೂತವಾದ ಕರ್ನಾಟಕ ಇತಿಹಾಸದ ಕಡೆಗೆ ಜನರು ವಿಶೇಷವಾಗಿ ಕಣ್ಣೆರೆದು ನೋಡಿಲ್ಲ. ಈ ಬಗೆಯ ಇತಿಹಾಸವು ಇಲ್ಲವೆಂದೇ ಇನ್ನೂ ಅನೇಕ ಸುಶಿಕ್ಷಿತರಲ್ಲಿಯೂ ಕೂಡ ಭಾವನೆಯದೆ; ಆದರೆ ಈ ಅಕ್ಷಮ್ಯವಾದ ತಪ್ಪು ತಿಳುವಳಿಕೆಯು ದೂರವಾಗಿ, ಕರ್ನಾಟಕದ ತರುಣರಾದರೂ ಕರ್ನಾಟಕದ ಇತಿಹಾಸವನ್ನು ಸಂಶೋಧಿಸಿ, ಇಂದಿಲ್ಲ ನಾಳೆ ಈ ದೇಶದ ಉಜ್ವಲವಾದ ಇತಿಹಾಸವನ್ನು ಮುಂದೆ ತರಬೇಕೆಂಬದೇ ಈ ಸಂಸ್ಥೆಯ ಮೂಲೋದ್ದೇಶವು. ಆದರೆ ಈ ಕೆಲಸವು ಒಬ್ಬಿಬ್ಬರ ಸಾಧಾರಣ ಪ್ರಯತ್ನದಿಂದ ಸಾಧ್ಯವಾಗುವುದಲ್ಲ. ಹಿಂದುಸ್ಥಾನದ ಉಳಿದ ಪ್ರಾಂತಗಳ ಇತಿಹಾಸಕ್ಕಿಂತ ಕರ್ನಾಟಕದ ಇತಿಹಾಸವನ್ನು ಸಂಶೋಧಿಸುವುದು ಕಠಿಣ ಕೆಲಸವಾಗಿದೆ; ಯಾಕಂದರೆ ಈ ಇತಿಹಾಸಕ್ಕೆ ಬಖರ ಮುಂತಾದ ಸಾಧನಗಳಿಲ್ಲ; ಇದು ಶಿಲಾಲೇಖ-ತಾಮ್ರ ಪಟಗಳಲ್ಲಿಯೂ, ದೇವಾಲಯ ಮುಂತಾದ ಕಟ್ಟಡಗಳಲ್ಲಿಯೂ, ವಾಙ್ಮಯದಲ್ಲಿಯೂ ಅತಿ ಸೂಕ್ಷ್ಮ ರೂಪದಿಂದ ಅಡಕವಾಗಿದೆ; ಮೇಲಾಗಿ ಈ ಇತಿಹಾಸವು ಮಿಕ್ಕ ಪ್ರಾಂತಗಳ ಇತಿಹಾಸಕ್ಕಿಂತ ಪ್ರಾಚೀನವಾದುದೂ, ಅಧಿಕ ಶತಮಾನಗಳವರೆಗೆ ಹಬ್ಬಿ ಕೊಂಡುದೂ ಆಗಿದೆ. ಆದುದರಿಂದ ಇದನ್ನು ಸಂಶೋಧಿಸುವುದಕ್ಕೆ ಜನ ಸಹಾಯವೂ, ಧನ ಸಹಾಯವೂ ಅತಿ ವಿಪುಲವಾಗಿ ಬೇಕು. ಕರ್ನಾಟಕ ಇತಿಹಾಸದಲ್ಲಿ ಅಭಿಮಾನ ಪಟ್ಟ ಸುಶಿಕ್ಷಿತರು ಒಂದಿಲ್ಲೊಂದು ಬಗೆಯಿಂದ ಈ ಕಾರ್ಯಕ್ಕೆ ನೆರವಾಗಬೇಕೆಂದು ಪ್ರಾರ್ಥನೆಯದೆ.