ಪುಟ:ಕರ್ನಾಟಕ ಗತವೈಭವ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೨ನೆಯ ಪ್ರಕರಣ - ಕರ್ನಾಟಕವು ಮೃತರಾಷ್ಟ್ರವೇ?

ಎಳ್ಳಷ್ಟೂ ಸದ್ದಿಲ್ಲದೆ ಮಲಗಿರುವ ಶೋಚನೀಯವೂ ಲಜ್ಜಾಸ್ಪದವೂ ಆದ ಸಂಗತಿ ಯನ್ನೂ ಅರಿಕೆ ಮಾಡಿಕೊಂಡೆವು. ಆದರೆ ನಿಜವಾಗಿಯೂ ಕನ್ನಡಿಗರಾದ ನಾವು ಹೀಗೆ ವಿಷಾದಗೊಂಡು ಹತಾಶರಾಗಲಿಕ್ಕೆ ಏನಾದರೂ ಪ್ರಬಲ ಕಾರಣವುಂಟೋ, ಎಂಬುದನ್ನು ನಾವೀ ಪ್ರಕರಣದಲ್ಲಿ ಯೋಚಿಸುವ.
ವಾಚಕರೇ, ತಿಪ್ಪೆಯು ಹೋಗಿ ಉಪ್ಪರಿಗೆಯಾದ ಕಥೆಗಳೂ ಅರಮನೆ ಹೋಗಿ ಸೆರೆಮನೆಯಾದ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಒಂದೆರಡು ಇರುತ್ತವೆಯೋ! ಅಹಹ! चक्रनेमिक्रमेण ಅಂದರೆ ಗಾಲಿಯ ಹಲ್ಲು ಗಳಂತ ತಿರುಗುತ್ತಿರುವ ಈ ಕಾಲನ ಅದ್ಭುತವಾದ ಕೃತಿಯನ್ನು ನಿರೀಕ್ಷಿಸಿದ ಹಾಗೆ ಮನಸ್ಸಲ್ಲವೂ ಅಗಾಧವಾದ ದುಃಖ ಸಮುದ್ರದಲ್ಲಿ ಮುಳುಗಿ, ಹೃದಯ ದೌರ್ಬಲ್ಯವನ್ನು ತಳೆವುದರಲ್ಲಿ ಸೋಜಿಗವೇನು! ಅದು ಮನುಷ್ಯ ಸ್ವಭಾವಕ್ಕನುಗುಣವಾಗಿಯೇ ಇದೆ. ಆದರೆ ಕ್ಷಣಿಕವಾದ ಈ ಹೃದಯ ದೌರ್ಬಲ್ಯವನ್ನೂ, ವಿಮೂಢ ಸ್ಥಿತಿಯನ್ನೂ ಕೊನೆಯ ವರೆಗೂ ಹಾಗೆಯೇ ಧೃಡವಾಗಿಟ್ಟು ಕೊಂಡು ಹೇಡಿಗಳಂತೆ ಅಳುತ್ತ ಕುಳಿತರೆ ಮಾತ್ರ ಅದು ಅಕ್ಷಮ್ಯವಾದ ತಪ್ಪಾಗುವದು; ಮತ್ತು ಈ ನಮ್ಮ ತಪ್ಪಿಗಾಗಿ ನಮಗೆ ಅಷ್ಟೇ ಅಲ್ಲದೆ, ನಮ್ಮ ಮಕ್ಕಳು ಮರಿಗಳಿಗೂ ಸಹ ನಮ್ಮ ಹೆಸರಿನಿಂದ ಕಲ್ಲೊಡೆಯುತ್ತ ಕುಳ್ಳಿರುವ ಪ್ರಸಂಗವು ಬಾರದೇ ಇರದು! ವೈಭವ ಶಿಖರವನ್ನಡರಿದ ಯಾವ ಜನಾಂಗಕ್ಕಾದರೂ ಒಮ್ಮೆಲ್ಲೊಮ್ಮೆ ಇಂಥ ದುರವಸ್ಥೆಯು ಬಂದೇ ತೀರಬೇಕಾಗಿ ಸೃಷ್ಟಿಯ ನಿಯಮವಿರುವದೆಂದು ಪ್ರಾಚೀನ ಇತಿಹಾಸವು ಈ ವಿಷಯದಲ್ಲಿ ನಮ್ಮನ್ನು ಸಂತಯಿಸಲಿಕ್ಕೆ ಕಾಯ್ದು ಕೊಂಡು ನಿಂತಿದೆ, ನಾವು ಜಾಣರಾದರೆ ಆ ಪ್ರಾಚೀನ ಇತಿಹಾಸದ ಅನುಭವದ ಮಾತನ್ನು ಕೇಳಿ, ನಮ್ಮ ಅಳ್ಳೆದೆಯನ್ನು ಕಲ್ಲೆದೆಯಾಗಿ ಮಾಡಲು ಪ್ರಯತ್ನಿಸಬೇಕು, ರಾಷ್ಟ್ರಕ್ಕೆ ಬಿಕ್ಕಟ್ಟಿನ ಸ್ಥಿತಿಯು ಒದಗಿದಾಗ, ಆ ರಾಷ್ಟ್ರೀಯರು ಕೌಟುಂಬಿಕ -ಅತಏವ ಸಂಕುಚಿತವಾದ- ತಮ್ಮ ವಿಚಾರಗಳನ್ನು ವಿಶಾಲ ಗೊಳಿಸಿ, ಮನೆಮಾರುಗಳನ್ನು ಕಸಕ್ಕಿಂತ ಕಡೆಮಾಡಿ, ಹೆಂಡಿರು ಮಕ್ಕಳನ್ನು ದೂರೀಕರಿಸಿ ಕ್ಷಣಹೊತ್ತು ಧೀರರಾಗಲಿಕ್ಕೆ ಬೇಕು, ಹೃದಯ ದೌರ್ಬಲ್ಯವು ಯಾರಿಗೆ ಉಚಿತವು ? ಮೃತರಾಷ್ಟ್ರಕ್ಕೆ! ಯಾವ ರಾಷ್ಟ್ರದೊಳಗಿನ ನಾಡಿಗಳ ಚಲನಯೆಲ್ಲವೂ ನಿಂತುಹೋಗಿ, ಸ್ವಲ್ಪವಾದರೂ ಜೀವಕಳೆ ಇರುವದಿಲ್ಲವೋ, ಯಾವ