ಪುಟ:ಕರ್ನಾಟಕ ಗತವೈಭವ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮ನೆಯ ಪ್ರಕರಣ - ರಾಷ್ಟ್ರಕೂಟರು.

೫೯


ಗೋವಿಂದನ ಮಗನೇ ಕನ್ನಡಿಗರೆಲ್ಲರಿಗೂ ಪರಿಚಿತನಾದ ಅಮೋಘು ವರ್ಷ ಅಥವಾ ನೃಪತುಂಗನು; ಉಪಲಬ್ಧವಿರುವ ಕನ್ನಡ ಗ್ರಂಥಗಳಲ್ಲಿ ಎಲ್ಲಕ್ಕೂ ಹಳೆಯದಾದ 'ಕವಿರಾಜಮಾರ್ಗ' ಎಂಬ ಪ್ರಖ್ಯಾತಗ್ರಂಥದ ಕರ್ತನು ಈತನೇ. ಗುಣಭದ್ರನ ಗುರುವೂ ಆದಿಪುರಾಣವೆಂಬ ಜೈನಗ್ರಂಥದ ಕರ್ತನೂ ಆದ ಜಿನಸೇನನು ಈ ನೃಪತುಂಗನ ಗುರು. ಮುಂಬಯಿ ಹತ್ತರಿರುವ ಕಾನೇರಿಯ ಶಿಲಾ ಲಿಪಿಗಳಲ್ಲಿ, ಅಲ್ಲಿಯ ಶಿಲಾಹಾರರು ಈ ನೃಪತುಂಗನ ಮಾಂಡಲಿಕರಾಗಿದ್ದಂತೆ ಉಲ್ಲೇಖವಿದೆ. ಈ ಅಮೋಘವರ್ಷನು ಮಳಖೇಡದಲ್ಲಿ ಕರ್ನಾಟಕ ಸಿಂಹಾಸನದ ಮೇಲೆ ಒಟ್ಟಿಗೆ ೬೩ ವರ್ಷಗಳವರೆಗೆ ಕುಳಿತು ಅತ್ಯಂತ ವೈಭವದಿಂದ ರಾಜ್ಯ ನಾಳಿದನು. ಇಂಥವನನ್ನು ಕನ್ನಡಿಗರು ಮರೆಯುವುದು ಹೇಗೆ ?

ದರೆ ಚಾಲುಕ್ಯರ ವಂಶದಲ್ಲಿ ಅತ್ಯಂತ ಪ್ರಸಿದ್ದನಾದ ೨ನೆಯ ಪುಲಿಕೇಶಿಯ ತರುವಾಯದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ದೊಡ್ಡ ಅರಸರು ಆಗಿಹೋದಂತೆ ಈ ರಾಷ್ಟ್ರಕೂಟರಲ್ಲಿ ಆಗಲಿಲ್ಲ. ಅಮೋಘವರ್ಷನ ತರುವಾಯದಲ್ಲಿ ಪಟ್ಟವೇರಿದ ಒಬ್ಬಿಬ್ಬ ಅರಸರು ಶೂರರಾಗಿ ಹೋದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ರಾಷ್ಟ್ರಕೂಟ ಅರಸರ ಹುಟ್ಟುಹಗೆಗಳಾದ ಚಾಲುಕ್ಯರು ಪ್ರಬಲರಾಗಿ, ಅವರಲ್ಲಿ ತೈಲಪನೆಂಬವನು ಈ ರಾಷ್ಟ್ರಕೂಟವಂಶದ ಅರಸನಾದ ಕರ್ಕನೆಂಬವನನ್ನು ಸಂಪೂರ್ಣವಾಗಿ ಸೋಲಿಸಿ, ರಾಜ್ಯವನ್ನು ಸೆಳೆದುಕೊಂಡು, ಪುನಃ ಚಾಲುಕ್ಯ ವಂಶವನ್ನು ಸ್ಥಾಪಿಸಿದನು (೯೭೨). ಈ ಮೇರೆಗೆ ನೃಪತುಂಗ ಅಥವಾ ಅಮೋಘವರ್ಷನ ತರುವಾಯ ಸುಮಾರು ನೂರು ವರ್ಷಗಳಲ್ಲಿಯೇ ಈ ವಂಶವು ಲಯ ಹೊಂದಿತು.