ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ. ವ್ಯಾಕರಣ ರಚನೆ, ಏಪ್ರಿಲ್-ಜೂಲೈ ೧೯೧೮. ಮುಖ್ಯ ತಾತ್ಪರ್ಯವೇನೆಂದರೆ :-ಶಬ್ದಮಣಿದರ್ಪಣ, ಶಬ್ದಾನುಶಾಸನ ಮುಂತಾದ ಪ್ರಾಚೀನ ವ್ಯಾಕರಣಗಳು ಅರ್ವಾಚೀನಕಾಲದ ಕನ್ನಡ ಭಾಷೆಯನ್ನು ನಿರ್ಧರಿಸುವುದಕ್ಕೆ ಅಸಮರ್ಥವಾಗಿವೆ. - ಆದುದರಿಂದ ಪ್ರಚಲಿತವಾದ ಕನ್ನಡ ಭಾಷೆಗೆ ವ್ಯಾಕರಣವನ್ನು ಹೇಗೆ ರಚಿಸ ಬೇಕು ?-ಎಂಬವಿಷಯವನ್ನು ಕುರಿತು ವಿವೇಚಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ವಿವರಣೆಯಲ್ಲಿ ಸುಲಭವಾಗಿ ತಿಳಿಯಬೇಕಾದರೆ, ಮೊದಲು ಪ್ರಚಲಿತ ವಾದ ಕನ್ನಡಭಾಷೆಯ ಇತಿಹಾಸವನ್ನು ಅರಿತುಕೊಳ್ಳುವುದು ಆವಶ್ಯಕ. ಆದ ಪ್ರಯುಕ್ತ ಅದನ್ನು ಹೇಳಲುಪಕ್ರಮಿಸುತ್ತೇನೆ. ಗೌತಮ ಬುವನ ಹಿಂದೆ ಎಂದರೆ ಕ್ರಿಸ್ತ ಪೂರ್ವ ೬ನೆಯ ಶತಮಾನಕ್ಕೆ ಹಿಂದೆ ಆರ್ಯಾವರ್ತದಲ್ಲಿ ಸಂಸ್ಕೃತಭಾಷೆ ಪ್ರಚಲಿತವಾಗಿದ್ದಿತು. ಆಗ ಮಾತನಾ ಡುವ ಭಾಷೆಯೂ, ಗ್ರಂಥಗಳಲ್ಲಿ ಬರೆಯುವ ಭಾಷೆಯೂ ಸಂಸ್ಕೃತವೊಂದೇ ಆಗಿದ್ದಿತು. ಆದರೆ ಈಚೆಗೆ ಸಂಸ್ಕೃತಭಾಷೆಯು ಅಸಭ್ರಂಶ ಹೊಂದಿ, ಮಾಗಧಿ, ಸಾಲಿ, ಮಹಾ ರಾಷ್ಟಿ ಮುಂತಾದ ಪ್ರಾಕೃತ ಭಾಷೆಗಳುಂಟಾದುದರಿಂದ ಸಂಸ್ಕೃತವು ಮೃತಭಾಷೆ ಯಾಯಿತು. ಅರ್ಥಾತ್ ವ್ಯಾವಹಾರಿಕ ಭಾಷೆಯೂ ಗ್ರಾಂಥಿಕ ಭಾಷೆಯೂ ಭಿನ್ನ ವಾದುವು ; ಹೇಗೆಂದರೆ, ಪಂಡಿತರು, ಮನೆಯೊಳಗಿನ ಹೆಂಗಸರು, ಹುಡುಗರು ಮತ್ತೂ ಸಾಮಾನ್ಯ ಜನಸಮೂಹ ಇವರೆಲ್ಲರ ಸಂಗಡ ಪ್ರಾಕೃತ ಭಾಷೆಯನ್ನು ಮಾತನಾಡ ಲಾರಂಭಿಸಿದರು. ಗ್ರಂಥಗಳಲ್ಲಿ ಮಾತ್ರ ಮೊದಲಿನಂತೆಯೇ ಸಂಸ್ಕೃತಭಾಷೆಯನ್ನೇ ಬರೆಯಲಾರಂಭಿಸಿದರು. ಇದಕ್ಕೆ ಸಂಸ್ಕೃತನಾಟಕಗಳೇ ಸಾಕ್ಷಿಯಾಗಿವೆ. ಯಾವ ಸಂಸ್ಕೃತಭಾಷೆಯ ನಾಟಕದಲ್ಲಿಯೂ ಸ್ತ್ರೀಯರು ಸಂಸ್ಕೃತ ಮಾತನಾಡುವುದಿಲ್ಲ ; ಪ್ರಾಕೃತ ಮಾತನಾಡುತ್ತಾರೆ. ಇರಲಿ. ಆದಕಾರಣ ಗ್ರಾಂಥಿಕಭಾಷೆಯು ವ್ಯಾವಹಾರಿಕಭಾಷೆಯಿಂದ ಭಿನ್ನವಾಗಿರ ಬೇಕೆಂಬ ಕಲ್ಪನೆಯು ಇದೇ ಕಾಲಕ್ಕೆ ಹುಟ್ಟಿತೆಂದು ಧಾರಾಳವಾಗಿ ಹೇಳಬಹುದು. ನನ್ನ ಕನ್ನಡ ಭಾಷೆಯಲ್ಲಿ ಗ್ರಂಥರಚನೆಯು ಕ್ರಿ. ಶ. ೨ನೆಯ ಅಥವಾ ೧-ನೆಯ ಶತಮಾನದಲ್ಲಿ ಪ್ರಾರಂಭವಾಯಿತೆಂದು ತಿಳಿದರೆ, ಆ ಹೊತ್ತಿಗೆ ಸಂಸ್ಕೃತಪಂಡಿತರಲ್ಲಿ, ಗ್ರಾಂಥಿಕ ಭಾಷೆಯು ವ್ಯಾವಹಾರಿಕ ಭಾಷೆಯಿಂದ ಭಿನ್ನವಾಗಿರಬೇಕೆಂಬ ಕಲ್ಪನೆಹುಟ್ಟ ೪-೫ ಶತಮಾನಗಳಾಗಿ ಹೋದುದರಿಂದ ಆ ಕಲ್ಪನೆಯು ಅವರ ಹೃದಯದಲ್ಲಿ ದೃಢಮೂಲವಾಗಿ ಹೋಗಿತ್ತು. ಈ ಸಂಸ್ಕೃತಪಂಡಿತರೇ ಕನ್ನಡದಲ್ಲಿ ಗ್ರಂಥಗಳನ್ನು ಬರೆಯುವುದಕ್ಕೆ ಉಪಕ್ರಮಿಸಿದವರು. ಎಂದರೆ, ಇವರು ಕನ್ನಡದ ವ್ಯಾವಹಾರಿಕ ಭಾಷೆಯಿಂದ ಭಿನ್ನವಾಗುವಂತೆ ಒಂದು ಕನ್ನಡ ಗ್ರಾಂಥಿಕ ಭಾಷೆಯನ್ನು ಏರ್ಪಡಿಸಿ ಕೊಂಡರು. ಇದೇ ಹಳಗನ್ನಡಭಾಷೆ, ಇದೇ ಪದ್ಯ ಭಾಷೆ, ಇದೇ ಕೃತ್ರಿಮಭಾಷೆ. ವ್ಯಾವಹಾರಿಕ ಭಾಷೆಯೇ ಹೊಸಗನ್ನಡಭಾಷೆ, ಇದೇ ಗದ್ಯಭಾಷೆ, ಇದೇ ನೈಸರ್ಗಿಕ ಭಾಷೆ. نی