ಪುಟ:ಕವಿಯ ಸೋಲು.pdf/೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ನಡೆದಳಂದು ನಿಂದಳಂದು
ಬೆಚ್ಚನುಸಿರು ಸುಯ್ಯುತಾ
ಕಚನ ನೆನೆದು ನೆನೆದು ಮನದಿ
ವಿರಹದುರಿಯ ತಾಳುತಾ

ಮೆಲ್ಲನೊಂದು ಮುಗಿಲು ಬಂದು
ತನ್ನ ತೋಳಲಪ್ಪಲು
ನಲ್ಲನೆಂದು ದೇವಯಾನಿ
ಹರುಷದಿಂದ ನಿಂದಳು

ಎಳೆಯ ತಳಿರು ಹೊಳೆವ ತಳಿರು
ನುಣ್ಣದವನು ಚುಂಬಿಸಿ
ಸುಖದ ಭಾವ ಸುಗ್ಗಿದೋರಿ
ತಳಿರು ಮುಖದಿ ಬಿಂಬಿಸೆ

ನಡೆದು ಬಳಲಿ ಮರವ ನೆಮ್ಮೆ
ಬನದ ನಡುವೆ ನಿಂದಳು
ಕಚನ ಬರವನೆದುರುನೋಡಿ
ದೃಷ್ಟಿ ದೂರ ನೆಟ್ಟಳು

ಸುಖವು ದುಃಖವೊಂದೆ ಕಾಲ
ದಲ್ಲಿ ಮನದಿ ಮೂಡಲು
ನೋಡಿ ಹಿಗ್ಗಿ ಸುಯ್ದು ತಗ್ಗಿ
ಕಚನ ಕಡೆಗೆ ನಡೆದಳು.

೨೩